ಕೊಪ್ಪಳ : ಸಚಿವ ಬಿ ಸಿ ಪಾಟೀಲ್ ಹೇಳಿಕೆಗೆಲ್ಲಾ ನಾನು ಉತ್ತರ ಕೊಡೋಕಾಗುತ್ತಾ? ವ್ಯಾಪಾರ ಮಾಡಿಕೊಂಡು ಹೋಗಿರುವವರಿಗೆ ಉತ್ತರ ಕೊಡಬೇಕಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
‘ಹೈಕಮಾಂಡ್ ತೀರ್ಮಾನವೇ ಅಂತಿಮ’
ಕೊಪ್ಪಳದಲ್ಲಿ ಅವರು ಮಾತನಾಡುತ್ತಾ, ಮುಂದಿನ ಸಿಎಂ ಬಗ್ಗೆ ನಮ್ಮಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ. ಶಾಸಕರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ.. ಸರ್ಕಾರ ರಚಿಸುವುದಕ್ಕೆ ಬೇಕಾದ ಮೆಜಾರಿಟಿ ಸ್ಥಾನಗಳನ್ನು ಪಡೆದ ಬಳಿಕ ಸಿಎಂ ಯಾರು ಅನ್ನೋದನ್ನ ಹೈಕಮಾಂಡ್ ನಿರ್ಧರಿಸುವುದು ನಮ್ಮ ಪದ್ಧತಿ ಎಂದು ಸ್ಪಷ್ಟಪಡಿಸಿದ್ರು.
‘17 ಶಾಸಕರನ್ನು ವಾಪಸ್ ಕರೆಸಿಕೊಳ್ಳಲ್ಲ’
ನಮ್ಮ ಪಕ್ಷದಿಂದ ಹೊರ ಹೋಗಿರುವ ಶಾಸಕರನ್ನು ಯಾವುದೇ ಕಾರಣಕ್ಕೂ ವಾಪಸ್ ಕರೆಸಿಕೊಳ್ಳುವುದಿಲ್ಲ. ನಮ್ಮ ಪಕ್ಷಕ್ಕೆ ದ್ರೋಹ ಬಗೆದು ಕೋಮುವಾದಿ ಬಿಜೆಪಿ ಸರ್ಕಾರ ರಚಿಸಲು ಅವರು ಸಹಕರಿಸಿದ್ದಾರೆ ಎಂದು 17 ಜನ ಶಾಸಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು.
‘ನಮ್ಮದು ಕಾಂಗ್ರೆಸ್ ಬಣ’
ನಮ್ಮಲ್ಲಿ ಸಿದ್ದರಾಮಯ್ಯ ಬಣ, ಡಿಕೆಶಿ ಬಣವಿಲ್ಲ. ನಮ್ಮದು ಒಂದೇ ಬಣ ಅದು ಭಾರತೀಯ ಕಾಂಗ್ರೆಸ್. ಡಿಕೆಶಿ ಬೇರೆ ಕೆಲಸವಿದೆ ಎಂದು ಹೇಳಿ ದೆಹಲಿಗೆ ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಕ್ಷೇತ್ರವನ್ನು ಇನ್ನೂ ನಿರ್ಧರಿಸಿಲ್ಲ. ಸದ್ಯ ನಾನು ಬದಾಮಿ ಕ್ಷೇತ್ರದ ಶಾಸಕ ಎಂದರು.
‘ಬಿಎಸ್ವೈ ತೊಲಗಿದರೆ ರಾಜ್ಯಕ್ಕೆ ಒಳ್ಳೆಯದು’
ಯಡಿಯೂರಪ್ಪ ರಾಜ್ಯದಿಂದ ಎಷ್ಟು ಬೇಗ ತೊಲಗುತ್ತಾರೋ ಅಷ್ಟೂ ಒಳ್ಳೆಯದು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಜನರಿಗೆ ಹಸಿ ಸುಳ್ಳುಗಳನ್ನು ಹೇಳುತ್ತಾ ವಂಚಿಸುತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ:ನಮ್ಮ ಪಕ್ಷದಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆಯಾಗುತ್ತಿಲ್ಲ: ಸಿದ್ದರಾಮಯ್ಯ