ಕೊಪ್ಪಳ : ಸರ್ಕಾರಿ ಕಚೇರಿಗೆ ಕರ್ತವ್ಯಕ್ಕೆ ಹಾಗೂ ವಿವಿಧ ಕೆಲಸ ಕಾರ್ಯಗಳಿಗಾಗಿ ಅನೇಕ ಮಹಿಳೆಯರು ಬರುತ್ತಾರೆ. ಅದರಲ್ಲೂ ತಾಯಂದಿರು ಸಹ ಇರುತ್ತಾರೆ. ಚಿಕ್ಕ ಮಕ್ಕಳನ್ನು ಕರೆತಂದು ಕೆಲಸ ಮಾಡುವುದು ತುಸು ಕಷ್ಟವೇ.. ಸದ್ಯ ಪೋಷಕರು ಈ ಕಷ್ಟವನ್ನು ಅರಿತ ಕೊಪ್ಪಳ ಜಿಲ್ಲಾಡಳಿತ ಮಕ್ಕಳ ಆರೈಕೆ ಕೇಂದ್ರ ಮತ್ತು ಮಹಿಳಾ ವಿಶ್ರಾಂತಿ ಕೇಂದ್ರವನ್ನು ಪ್ರಾರಂಭಿಸಿದೆ.
ಜಿಲ್ಲಾಡಳಿತ ಭವನದಲ್ಲಿರುವ ಪಂಚಾಯತ್ ಕಚೇರಿಯಲ್ಲಿ ಸಪ್ಟೆಂಬರ್ 17ರಂದು ಶಿಶು ಪಾಲನಾ ಹಾಗೂ ಮಹಿಳಾ ವಿಶ್ರಾಂತಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಬೆಳಗ್ಗೆ 9:30ಕ್ಕೆ ಪ್ರಾರಂಭವಾಗಿ ಸಂಜೆ 5 ಗಂಟೆಯವರೆಗೂ ಈ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಕಚೇರಿ ನೋಡಿಕೊಳ್ಳಲು ಓರ್ವ ಸಿಬ್ಬಂದಿಯನ್ನು ಸಹ ನೇಮಿಸಲಾಗಿದೆ.
ಶಿಶು ಪಾಲನಾ ಕೇಂದ್ರವು ಬಹುತೇಕ ಬಾಲವಾಡಿಯಂತೆ ಕಾರ್ಯನಿರ್ವಹಿಸುತ್ತದೆ. ಜಿಲ್ಲಾಡಳಿತಕ್ಕೆ ಬರುವ ತಾಯಂದಿರು ತಮ್ಮ ಮಕ್ಕಳಿಗೆ ಹಾಲು ಕುಡಿಸಿ ಅವರನ್ನು ತೊಟ್ಟಿಲಲ್ಲಿ ಹಾಕಿ ಹೋಗಬಹುದು.
ಇಲ್ಲಿ ಆರೈಕೆ ಮಾಡುವ ಸಿಬ್ಬಂದಿ ಮಗುವಿನ ಪಾಲಕರ ದೂರವಾಣಿ ಸಂಖ್ಯೆ ತೆಗೆದುಕೊಂಡು ಅವರ ಕೆಲಸ ಮುಗಿಯುವವರೆಗೂ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಒಂದು ವೇಳೆ ಮಕ್ಕಳು ಅಳಲು ಆರಂಭಿಸಿದರೆ ಪಾಲಕರಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ.
ಪ್ರತಿನಿತ್ಯ 5-6 ಮಕ್ಕಳನ್ನು ಇಲ್ಲಿ ಆರೈಕೆ ಮಾಡಲಾಗುತ್ತಿದೆ. ಕೆಲವರಿಗೆ ಜಿಲ್ಲಾಡಳಿತ ಭವನದಲ್ಲಿ ಶಿಶುಪಾಲನಾ ಕೇಂದ್ರವಿರುವುದು ಗೊತ್ತಿಲ್ಲ. ಇದು ಹೆಚ್ಚು ಜನರಿಗೆ ಮಾಹಿತಿ ದೊರೆತರೆ ತಾಯಂದಿರು ನಿಶ್ಚಿಂತಿಯಿಂದ ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು ಹೋಗಿ ತಮ್ಮ ಕೆಲಸ ಮಾಡಿಕೊಳ್ಳಬಹುದು. ಈ ಕೇಂದ್ರ ಆರಂಭದಿಂದ ಈವರೆಗೂ 36ಕ್ಕೂ ಹೆಚ್ಚು ಮಕ್ಕಳನ್ನು ಆರೈಕೆ ಮಾಡಲಾಗಿದೆ ಎಂದು ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದರು.
ನಾನು ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಜಿಲ್ಲಾಡಳಿತ ಭವನಕ್ಕೆ ಬಂದಿದ್ದೆ. ಅಲ್ಲಿ ಮಗುವನ್ನು ಎತ್ತಿಕೊಂಡು ನಿಲ್ಲಲು ಆಗುವುದಿಲ್ಲ. ಇಲ್ಲಿ ಬಿಟ್ಟು ಹೋಗಿ ನಮ್ಮ ಕೆಲಸ ಮುಗಿಸಿಕೊಂಡು ಹೋಗುವಾಗ ಕರೆದುಕೊಂಡು ಹೋಗುತ್ತೇನೆ.
ಇದು ಒಳ್ಳೆಯ ಕೆಲಸ ಎನ್ನುತ್ತಾರೆ ಚಿಕ್ಕಸಿಂದೋಗಿಯಿಂದ ಬಂದಿದ್ದ ವಿದ್ಯಾ. ನಾನಾ ಕೆಲಸಗಳಿಗೆ ಜಿಲ್ಲಾಡಳಿತ ಕೇಂದ್ರಕ್ಕೆ ಬರುವ ತಾಯಂದಿರಿಗೆ ಈ ಕೇಂದ್ರ ಉಪಯೋಗಕಾರಿಯಾಗಿದೆ. ತಾಯಂದಿರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.