ಗಂಗಾವತಿ: ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನರ್ಸ್ ಒಬ್ಬರಿಗೆ ಕೊರೊನಾ ಸೊಂಕು ದೃಢಪಟ್ಟಿದ್ದು, ಇದೀಗ ಇಡೀ ಆಸ್ಪತ್ರೆಯನ್ನು ಸೀಲ್ಡೌನ್ ಮಾಡುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.
ನರ್ಸ್ಗೆ ಹೆರಿಗೆ ಆಗಿ ಕೇವಲ ಆರು ತಿಂಗಳು ಕಳೆದಿದ್ದು, ಅವರು ಇತ್ತೀಚೆಗಷ್ಟೆ ಕರ್ತವ್ಯಕ್ಕೆ ಹಾಜರಾಗಿದ್ದರು. ಹೆರಿಗೆ ಕೋಣೆಯಲ್ಲಿ ಸೋಮವಾರದವರೆಗೂ ಕರ್ತವ್ಯ ನಿರ್ವಹಿಸಿದ್ದಾರೆ ಎನ್ನಲಾಗ್ತಿದೆ. ಇದೀಗ ಈ ಪ್ರಕರಣ ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ನರ್ಸ್ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಪತ್ತೆ ಕಾರ್ಯ ನಡೆದಿದೆ. ಆಸ್ಪತ್ರೆಗೆ ನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ. ಹೀಗಾಗಿ ಆಸ್ಪತ್ರೆಯನ್ನು ಸೀಲ್ಡೌನ್ ಮಾಡಿದರೆ ರೋಗಿಗಳಿಗೆ ಸಮಸ್ಯೆಯಾಗಲಿದೆ ಎಂಬ ಆತಂಕವೂ ಇದೆ.
ಈ ಪ್ರಕರಣದಿಂದಾಗಿ ಇಡೀ ಆಸ್ಪತ್ರೆಯ ಸಿಬ್ಬಂದಿ ಆತಂಕದಲ್ಲಿದ್ದು, ಜಿಲ್ಲಾಡಳಿತ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಆಸ್ಪತ್ರೆಯ ಸೀಲ್ಡೌನ್ ಪ್ರಕ್ರಿಯೆ ನಿಂತಿದೆ.