ಕೊಪ್ಪಳ: ಸಹಕಾರ ತತ್ವ ಇಂದು ನಿನ್ನೆಯದಲ್ಲ, ಅದು ಪ್ರಾಚೀನ ಕಾಲದಿಂದಲೂ ಇದೆ. ಆದರೆ, ಅದು ಸಾಂಸ್ಥಿಕರೂಪ ಪಡೆದುಕೊಂಡು ನೂರು ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದಿತು ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅಭಿಪ್ರಾಯಪಟ್ಟರು.
ನಗರದ ಕುಷ್ಟಗಿ ರಸ್ತೆಯಲ್ಲಿರುವ ಜಿಲ್ಲಾ ಸಹಕಾರ ಯೂನಿಯನ್, ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ, ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ತತ್ವ ಪ್ರಾಚೀನ ಕಾಲದಿಂದಲೂ ಇದೆ. ಇದನ್ನು ಸಹನಾವವತು, ಸಹನೌ ಭುನಕ್ತು, ಸಹವೀರ್ಯಂ ಕರವಾವಹೈ , ತೇಜಸ್ವಿ ನಾಮದೀತ ಮಸ್ತು ಎಂಬ ಶ್ಲೋಕ ಉದಾಹರಣೆಯಾಗುತ್ತದೆ. ಪರಸ್ಪರ ಸಹಕಾರದೊಂದಿಗೆ ಬದುಕು ನಡೆಸಬೇಕು. ಆದರೆ, ಇದಕ್ಕೆ ನೂರು ವರ್ಷದ ಹಿಂದೆ ಸಾಂಸ್ಥಿಕ ರೂಪದೊಂದಿಗೆ ಅಸ್ತಿತ್ವಕ್ಕೆ ತರಲಾಯಿತು. ಸಹಕಾರಿ ಕ್ಷೇತ್ರ ಸ್ವಾರ್ಥ ರಹಿತವಾದದ್ದು. ಸ್ವಾರ್ಥಿಗಳು ಈ ಕ್ಷೇತ್ರಕ್ಕೆ ನುಗ್ಗಿದರೆ ಸಹಕಾರ ಕ್ಷೇತ್ರ ಮುಳುಗುತ್ತದೆ. ಇಲ್ಲಿ ಸೇವಾ ಮನೋಭಾವನೆ ಹೊಂದಿರಬೇಕು ಎಂದರು. ಇನ್ನು ಸಹಕಾರದ ಕುರಿತು ಜನರಿಗೆ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಕೆಲಸ ಮಾಡಬೇಕು ಎಂದರು.