ಕುಷ್ಟಗಿ: ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಪರಿಪರಿಯಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಬೇಡಿಕೊಂಡರೂ ಕುಷ್ಟಗಿ ತಾಲೂಕಿನ ಅಡವಿಬಾವಿ ಗ್ರಾಮದಲ್ಲಿ ವೃದ್ಧರು ನಿರಾಕರಿಸಿ ರಂಪಾಟ ನಡೆಸಿದ್ದಾರೆ.
ಅಡವಿಬಾವಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಲಸಿಕಾ ಮೇಳ ಹಮ್ಮಿಕೊಂಡಿದ್ದಾರೆ. ಈ ವೇಳೆ, ಹನುಮವ್ವ ತಳವಾರ ಎಂಬ ವೃದ್ಧೆಗೆ ಲಸಿಕೆ ಹಾಕಲು ಮುಂದಾದಾಗ ಅಜ್ಜಿ ರಂಪಾಟ ನಡೆಸಿ, ಸಿಬ್ಬಂದಿಗೆ ಅವಾಜ್ ಹಾಕಿದ್ದಾರೆ.
ವಲ್ಲೇ..ಪಾ, ಎಪ್ಪಾ..ನಾ...ವಲ್ಲೇ, ಸೂಜಿ ಹಾಕಿಸಿಕೊಳ್ಳುವುದಿಲ್ಲ, ಏಷ್ಟು ಒತ್ತಾಯ ಮಾಡಕತ್ತೀರಿ. ಬೇಕಾದ್ರ ನನ್ ಪಗಾರ್ ಕಟ್ ಮಾಡ್ರಿ. ಲಸಿಕೆ ಮಾತ್ರ ಹಾಕಿಸಿಕೊಳ್ಳಲ್ಲ. ನಾ ಸತ್ತೆ ಅಂದ್ರೆ ಅದಕ್ಕೆ ನೀವಾ ಜವಾಬ್ದಾರರು. ಒಂದು ಹಾಳೆಲ್ಲಿ ನಿಮ್ ನಾಲ್ಕು ಮಂದಿ ಹೆಸರು ಬರೆದು ಕೊಡ್ರಿ. ನಾ ಸತ್ತೆ ಎಂದರೆ ನಿಮ್ಮನ್ನ ಹಿಡ್ಕೊಂಡು ಹೋಗ್ತಾರೆ ಎಂದು ಸಿಬ್ಬಂದಿಗೆ ಹೆದರಿಸಿದರು. ಕೊನೆಗೂ ಅಜ್ಜಿ ಮನವೊಲಿಸಲು ವಿಫಲರಾದ ಆರೋಗ್ಯ ಸಿಬ್ಬಂದಿ ವಿಧಿ ಇಲ್ಲದೇ ಅಲ್ಲಿಂದ ಜಾಗ ಖಾಲಿ ಮಾಡಿದರು.
ಗ್ರಾಮದ ವಯೋವೃದ್ಧ ಹನಮಪ್ಪ ಹನಮಸಾಗರ ಸಹ ಕೋವಿಡ್ ಲಸಿಕೆ ಹಾಕಿಸಿಕೊಳ್ಳದೇ ಸಿಬ್ಬಂದಿಗೆ ಆವಾಜ್ ಹಾಕಿದ್ದಾರೆ. ಎರಡ್ ಎತ್ತು, ಒಂದು ಎಮ್ಮಿ, ಕಾಳು ಎಲ್ಲಾ ತಗೋಳ್ರೀ. ಆದರೆ ಲಸಿಕೆ ಮಾತ್ರ ವಲ್ಲೆ ಡಾಕ್ಟರ್, ನಾ ಲಸಿಕೆ ಹಾಕಿಸಿ ಕೊಳ್ಳಲ್ಲ ಅಂತಾ ಪ್ರತಿಜ್ಞೆ ಮಾಡೀನಿ ಎಂದು ಸಿಬ್ಬಂದಿಗೆ ತಿಳಿಸಿದ್ರು.
ಓದಿ: ಯುಲಿಪ್ ಪಾಲಿಸಿಗಳಲ್ಲಿ ಹೂಡಿಕೆ ಮಾಡುವುದು ಹೇಗೆ? ಇದು ಎಷ್ಟು ಲಾಭಕರ?
ಪೆಟ್ಟು ತಿಂದ ಪಿಡಿಒ:
ಅಡವಿಬಾವಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಲಸಿಕೆ ಹಾಕಲು ಮುಂದಾದಾಗ ಸದರಿ ವ್ಯಕ್ತಿ ತಪ್ಪಿಸಿಕೊಂಡು ಓಡಲಾರಂಭಿಸಿದ್ದಾರೆ. ಇದೇ ವೇಳೆ ಪಿಡಿಒ ವೆಂಕಟೇಶ ನಾಯಕ್, ಓಡಿ ಹೋದ ವ್ಯಕ್ತಿಯನ್ನು ಬೆನ್ನತ್ತಿದ ವೇಳೆ ಕಲ್ಲಿಗೆ ಎಡವಿ ಬಿದ್ದಿದ್ದಾರೆ. ಪರಿಣಾಮ ವೆಂಕಟೇಶ ಮೊಣಕಾಲಿಗೆ ಪೆಟ್ಟಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ