ಕೊಪ್ಪಳ: ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆ ಪ್ರದೇಶದಲ್ಲಿ ಉಳಿದುಕೊಂಡಿದ್ದ ರೆಸಾರ್ಟ್ಗಳ ತೆರವಿಗೆ ಅಧಿಕಾರಿಗಳು ನೋಟಿಸ್ ನೀಡಿ ಏಳು ದಿನಗಳೊಳಗೆ ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಿ ಎನ್ ಲೋಕೇಶ್ ಹಾಗೂ ಗಂಗಾವತಿ ತಹಶೀಲ್ದಾರ್ ಚಂದ್ರಕಾಂತ ಅವರು ವಿರುಪಾಪುರಗಡ್ಡೆಯ ಲಕ್ಷ್ಮಿಗೋಲ್ಡನ್ ಬೀಚ್ ರೆಸಾರ್ಟ್ ಮಾಲೀಕ ಡಿ. ಪ್ರಸಾದ್ ಬಾಬು ಎಂಬುವರಿಗೆ ನೋಟಿಸ್ ನೀಡಿ, ಅನಧಿಕೃತ ರೆಸಾರ್ಟ್ ಹಾಗೂ ಇತರ ನಿರ್ಮಾಣಗಳನ್ನು ತೆರವುಗೊಳಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಈ ಕುರಿತಂತೆ ಪಿ ಎನ್ ಲೋಕೇಶ್ ಮಾಡಿನಾಡಿ, ವಿಶ್ವ ಪರಂಪರೆ ತಾಣ ಹಂಪಿಯ ವ್ಯಾಪ್ತಿಯಲ್ಲಿ ಬರುವ ವಿರುಪಾಪುರಗಡ್ಡೆ ಸಂರಕ್ಷಿತ ಪ್ರದೇಶದಲ್ಲಿ ಕೃಷಿ ಹೊರತು ಪಡಿಸಿ ಯಾವುದೇ ನಿರ್ಮಾಣ, ಚಟುವಟಿಕೆ ನಡೆಸುವಂತಿಲ್ಲ. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆ ಈಗಾಗಲೇ ಈ ಹಿಂದೆ ಇಲ್ಲಿನ ಅನಧಿಕೃತ ರೆಸಾರ್ಟ್ಗಳನ್ನು ತೆರವುಗೊಳಿಸಲಾಗಿದೆ ಎಂದರು.
ಲಕ್ಷ್ಮಿ ಗೋಲ್ಡನ್ ಬೀಚ್ ರೆಸಾರ್ಟ್ ಮಾಲೀಕರು ಧಾರವಾಡ ವಿಭಾಗೀಯ ಪೀಠದಲ್ಲಿ ಸಲ್ಲಿಸಿದ್ದ ಅರ್ಜಿ ಜೂನ್ 29ರಂದು ವಜಾಗೊಂಡಿದೆ. ರಾಜ್ಯ ಸರ್ಕಾರ ಹಾಗೂ ಹಂಪಿ ಅಭಿವೃದ್ದಿ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ನಿರ್ಮಿಸಲಾದ ಎಲ್ಲ ನಿರ್ಮಾಣಗಳನ್ನು ತೆರವುಗೊಳಿಸುತ್ತೇವೆ. ಏಳು ದಿನಗಳೊಳಗಾಗಿ ಈ ರೆಸಾರ್ಟ್ ಹಾಗೂ ಎಲ್ಲ ನಿರ್ಮಾಣಗಳನ್ನು ತೆರವುಗೊಳಿಸಿಕೊಳ್ಳಲು ಅವರಿಗೆ ಕಾಲಾವಕಾಶ ನೀಡಲಾಗಿದೆ ಎಂದರು.
ಏಳು ದಿನದ ಬಳಿಕ ನಾವೇ ತೆರವು ಕಾರ್ಯಾಚರಣೆ ನಡೆಸುತ್ತೇವೆ. ಕಾರ್ಯಾಚರಣೆಯ ಖರ್ಚನ್ನು ರೆಸಾರ್ಟ್ ಅಥವಾ ಆ ನಿರ್ಮಾಣಗಳ ಮಾಲೀಕರು ಭರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.