ಕೊಪ್ಪಳ: ಜಿಲ್ಲೆಯಾದ್ಯಂತ ಬರ ಆವರಿಸಿದ್ದು, ಜಿಲ್ಲೆಯ ಅನೇಕ ಕಡೆ ಇನ್ನೂ ಮಳೆಯಾಗಿಲ್ಲ. ಇದರ ನಡುವೆ ಕೆಲವೆಡೆ ಬೋರ್‍ವೆಲ್‍ಗಳು ಕೈಕೊಟ್ಟಿದ್ದರೆ, ಮತ್ತೊಂದಿಷ್ಟು ಕಡೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಬೆಳೆಗಳನ್ನು ಕಳೆದುಕೊಳ್ಳುವ ಭೀತಿ ರೈತರನ್ನು ಆವರಿಸಿದೆ.
ಜಿಲ್ಲೆಯಲ್ಲಿ ಬರಗಾಲವಿದೆ ಎಂಬ ಮಾತಿಗೆ ಪುಷ್ಠಿ ನೀಡುವಂತೆ ಇಲ್ಲೋರ್ವ ರೈತ ಸಾಲ ಮಾಡಿ ಬೆಳೆದಿರುವ ಕಲ್ಲಂಗಡಿ ಬೆಳೆಯನ್ನು ಉಳಿಸಿಕೊಳ್ಳಲು ತಂಬಿಗೆಯಲ್ಲಿ ಬಳ್ಳಿಗೆ ಗುಟುಕು ನೀರುಣಿಸುತ್ತಿದ್ದಾರೆ.
ಹೌದು, ಹಿರೇಸೂಳಿಕೇರಿ ಗ್ರಾಮದ ನಿಂಗಪ್ಪ ಎಂಬ ರೈತನ ಪಾಡು ಅಯೋಮಯ ಎನ್ನುವಂತಾಗಿದೆ. ಸುಮಾರು ಎರಡು ಎಕರೆ ಭೂಮಿಯಲ್ಲಿ ಬೀಜೋತ್ಪಾದನೆಯ ಕಲ್ಲಂಗಡಿ ಬೆಳೆಯನ್ನು ಬೆಳೆದಿದ್ದಾರೆ. ಇನ್ನೇನು ಬೆಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿರುವಾಗಲೇ ಕೊಳವೆಬಾವಿ ಕೈಕೊಟ್ಟಿದೆ. ಜೊತೆಗೆ ಪದೇ ಪದೇ ಕಣ್ಣಾಮುಚ್ಚಾಲೆ ಆಡುವ ವಿದ್ಯುತ್ ಸಹ ರೈತನಿಗೆ ಸಂಕಷ್ಟ ತಂದೊಡ್ಡಿದೆ. ಕಲ್ಲಂಗಡಿ ಬೆಳೆಗೆ ನೀರಿಲ್ಲದೆ ಇರೋದ್ರಿಂದ ಇರುವ ಬೆಳೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಈ ರೈತ ಹರಸಾಹಸ ಮಾಡುತ್ತಿದ್ದಾರೆ.
ದೂರದ ತಗ್ಗೊಂದರಲ್ಲಿ ನಿಂತಿರುವ ನೀರನ್ನು ಕೊಡಗಳಲ್ಲಿ ತಂದು ಅದನ್ನು ಬಕೆಟ್‍ನಲ್ಲಿ ಹಿಡಿದು ತಂಬಿಗೆಯ ಮೂಲಕ ಒಂದೊಂದು ಬಳ್ಳಿಗೂ ನೀರಿನ ಗುಟುಕು ಹಾಕುತ್ತಿದ್ದಾರೆ. ನೀರಿಲ್ಲದೆ ಒಣಗಿ ಹೋಗುವ ಕಲ್ಲಂಗಡಿ ಬೆಳೆಯನ್ನು ಉಳಿಸಿಕೊಳ್ಳಲು ರೈತ ನಿಂಗಪ್ಪ ನಿತ್ಯವೂ ಆರು ಜನ ಕೂಲಿಯಾಳುಗಳ ಸಹಾಯದಿಂದ ತಂಬಿಗೆಯಿಂದ ನೀರುಣಿಸುತ್ತಿದ್ದಾರೆ.
ಈಗಾಗಲೇ ಹತ್ತಾರು ಸಾವಿರ ರೂ. ಖರ್ಚು ಮಾಡಿ, ಮತ್ತೆ ಸಾಲ ಮಾಡುವಂತಾಗಿದೆ. ಈಗ ಆಳುಗಳಿಂದ ನೀರು ಹಾಕಿಸುತ್ತಿದ್ದೇನೆ. ಮಳೆಯಾದರೆ ಮಾತ್ರ ಈ ಬೆಳೆ ಕೈಗೆ ಬರುತ್ತದೆ. ಇಲ್ಲವಾದಲ್ಲಿ ನನ್ನ ಪಾಡು ಹೇಳತೀರದು ಎಂದು ರೈತ ನಿಂಗಪ್ಪ ನೊಂದು ನುಡಿಯುತ್ತಾನೆ. ಅಲ್ಲದೆ, ಈಗಾಗಲೇ ಸುಮಾರು ಒಂದು ಲಕ್ಷ ರೂಪಾಯಿ ಈ ಬೆಳೆಗೆ ಖರ್ಚು ಮಾಡಿದ್ದೇನೆ. ಮಾಡಿದ ಸಾಲವಾದರೂ ತೀರುವ ನಿಟ್ಟಿನಲ್ಲಾದರೂ ಬೆಳೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಎನ್ನುತ್ತಾರೆ ನಿಂಗಪ್ಪ.
ಒಟ್ಟಿನಲ್ಲಿ ಒಂದು ಕಡೆ ಮಳೆ ಇಲ್ಲದೆ ಸಂಕಷ್ಟದಲ್ಲಿದ್ದರೆ, ಇರುವ ಬೋರ್‍ವೆಲ್ ನಂಬಿಕೊಂಡು ಅಷ್ಟೋ-ಇಷ್ಟೋ ಬೆಳೆ ಬೆಳೆದಿರುವ ರೈತರಿಗೆ ಮಳೆ ಕೂಡಾ ಕೈ ಕೊಡುತ್ತಿದೆ.