ಕೊಪ್ಪಳ: ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ್ ಅಂಗಡಿ ಅವರಿಗೆ ನಾನು ಯಾವುದೇ ರೀತಿಯಲ್ಲಿ ಅವಮಾನ ಮಾಡಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯ ಕಾರಟಿಗಿಯಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳಾ ಅಂಗಡಿ ಅವರಿಗೆ ನಾನು ಅವಮಾನ ಮಾಡಿಲ್ಲ. ಇಷ್ಟು ದಿನ ಸುರೇಶ್ ಅಂಗಡಿಗೆ ವೋಟ್ ನೀಡಿದ್ದೀರಾ, ಈ ಬಾರಿ ಸತೀಶ್ ಜಾರಕಿಹೊಳಿಗೆ ಮತ ನೀಡಿ ಎಂದು ಕೇಳಿದ್ದೇನೆ. ಸಚಿವ ಜಗದೀಶ್ ಶೆಟ್ಟರ್ ಅವರು ಬೀಗರೆಂಬ ಕಾರಣಕ್ಕೆ ಏನಾದರೂ ಹೇಳಬಹುದು. ನನ್ನ ಸ್ಟೆಟ್ಮೆಂಟ್ ಜನರಿಗೆ ಹೇಳಿದ್ದೇನೆ. ನನ್ನ ಹೇಳಿಕೆಯನ್ನು ಜನರು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ಮುಖ್ಯವೇ ಹೊರತು ಜಗದೀಶ್ ಶೆಟ್ಟರ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಮುಖ್ಯವಲ್ಲ. ನಾನ್ಯಾಕೆ ಕ್ಷಮೆ ಕೇಳಬೇಕು ಎಂದು ಪ್ರಶ್ನಿಸಿದರು.
ಸೋನಿಯಾ ಗಾಂಧಿ ಅವರು ಅನುಭವ ಇದ್ದರೂ ತಾವು ಪ್ರಧಾನಿಯಾಗದೆ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಇಂತಹ ತ್ಯಾಗದ ಮನೋಭಾವ ಬಿಜೆಪಿಯವರಿಗೆ ಇದೆಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಓದಿ: ಕಾಂಗ್ರೆಸ್‍ಗೆ ಹರಕೆ ಕುರಿ ಸಿಕ್ಕಿದೆ: ಸಿ.ಟಿ. ರವಿ ವ್ಯಂಗ್ಯ
ವಿಜಯೇಂದ್ರ ಯಾರು?:
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಹೆಸರು ಹೇಳುತ್ತಲೇ ಗರಂ ಆದ ಸಿದ್ದರಾಮಯ್ಯ, ವಿಜಯೇಂದ್ರ ಏನ್ ಸಚಿವರಾಗಿದ್ರಾ, ಮುಖ್ಯಮಂತ್ರಿಯಾಗಿದ್ರಾ, ಯಡಿಯೂರಪ್ಪನ ಮಗ ಅನ್ನೋದು ಬಿಟ್ಟರೆ ಅವರಿಗೆ ಏನು ಅರ್ಹತೆ ಇದೆ. ವಿಜಯೇಂದ್ರ ಯಾರು, ಅವರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಈಶ್ವರಪ್ಪ ಪೆದ್ದ, ಅವನ ಬ್ರೇನ್‍ಗೂ ನಾಲಿಗೆಗೂ ಲಿಂಕ್ ಇಲ್ಲ. ಬಾಯಿಗೆ ಬಂದಂತೆ ಮಾತಾಡ್ತಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಈಶ್ವರಪ್ಪನಿಗೆ ಏನು ಗೊತ್ತು ?:
ನಾನು ಕಾಂಗ್ರೆಸ್ ಹೇಗೆ ಸೇರಿದೆ ಗೊತ್ತಾ ಎಂದ ಸಿದ್ದರಾಮಯ್ಯ, ಜೆಡಿಎಸ್‍ನಿಂದ ನನ್ನನ್ನು ಹೊರಗೆ ಹಾಕಿದರು. ಒಂದು ವರ್ಷ ಅಹಿಂದ ಕಟ್ಟಿದೆ. ಆಮೇಲೆ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ನನ್ನನ್ನು ಕಾಂಗ್ರೆಸ್‍ಗೆ ಆಹ್ವಾನಿಸಿದರು. ಬಿಜೆಪಿ ವಿರುದ್ಧ ಹೋರಾಡಲು ನಾನು ಕಾಂಗ್ರೆಸ್ ಸೇರಿದೆ. ಈಶ್ವರಪ್ಪಗೆ ಇದ್ಯಾವುದು ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಓರ್ವ ವಿದೂಷಕ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಓದಿ: ರಾಹುಲ್ ಗಾಂಧಿ ಬೆಳಗಾವಿಗೆ ಬಂದ್ರೆ ಅವ್ರು ಸಿಂಹವೋ, ನರಿಯೋ, ಕುರಿಯೋ ಗೊತ್ತಾಗಲಿದೆ: ಈಶ್ವರಪ್ಪ ವ್ಯಂಗ್ಯ
ರಾಜ್ಯದಲ್ಲಿ ಭಾನುವಾರ ಒಂದೇ ದಿನ 10 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಸರ್ಕಾರ ಬಿಗಿ ಕ್ರಮ ಕೈಗೊಂಡಿಲ್ಲ. ಸರ್ಕಾರದ ತಪ್ಪಿನಿಂದ ಎರಡನೇ ಅಲೆ ಶುರುವಾಗಿದೆ. ಲಾಕ್‍ಡೌನ್‍ನಿಂದ ಪರಿಹಾರವಾಗಲ್ಲ. ಮಹಾರಾಷ್ಟ್ರ, ಕೇರಳದಿಂದ ಜನರು ಬರುತ್ತಾರೆ. ಅವರನ್ನು ಟೆಸ್ಟ್ ಮಾಡೋದಿಲ್ಲ. ಸರ್ಕಾರ ದುಡ್ಡು ಹೊಡೆಯುವುದರಲ್ಲಿ ಕಾಲಹರಣ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.