ಕುಷ್ಟಗಿ(ಕೊಪ್ಪಳ): ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಟೆಂಡರ್ ಆಗಿದ್ದರೂ ಕೊರೊನಾ ನೆಪ ಹೇಳಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿನ ಮಾರುತಿ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕಾಗಿ ಕ್ಯಾಬಿನ್ ಅಳವಡಿಸಲಾಗಿದ್ದರೂ ಯಂತ್ರ ಅಳವಡಿಸಲು ವಿಳಂಬಕ್ಕೆ ಕೊರೊನಾ ಲಾಕ್ಡೌನ್ ನೆಪ ತೋರಲಾಗುತ್ತಿದೆ. ಈ ಕುರಿತು ಪುರಸಭೆ ಸದಸ್ಯೆ ಗೀತಾ ಕೋಳೂರು ಅವರನ್ನು ವಿಚಾರಿಸಿದರೆ, ಶುದ್ಧ ನೀರಿನ ಘಟಕದ ಕ್ಯಾಬಿನ್ ಒಬ್ಬರಿಗೆ ಟೆಂಡರ್ ಆಗಿದ್ದು, ಇನ್ನೊಬ್ಬರಿಗೆ ನೀರು ಶುದ್ಧೀಕರಿಸುವ ಯಂತ್ರಗಳ ಟೆಂಡರ್ ಆಗಿದೆ. ಈ ವಿಳಂಬದ ಬಗ್ಗೆ ಸಂಬಂಧಿಸಿದವರನ್ನು ವಿಚಾರಿಸುವುದಾಗಿ ಹೇಳಿದ್ದಾರೆ.
ಸದ್ಯ ನೀರಿಗಾಗಿ ಹಾಹಾಕಾರ ಪಡುವ ಪರಿಸ್ಥಿತಿ ಇದೆ. ಆದರೂ ಶುದ್ಧ ನೀರಿನ ಘಟಕ ಅಳವಡಿಸಿಲ್ಲ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.