ಕೊಪ್ಪಳ: ಜಿಲ್ಲೆಯ ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ಪ್ರವಾಹ ಭೀತಿ ಎದುರಿಸುತ್ತಿದ್ದ ಸುಮಾರು 200 ಕ್ಕೂ ಹೆಚ್ಚು ಜನರ ರಕ್ಷಣಾ ಕಾರ್ಯ ಶುರು ಮಾಡಲಾಗಿದೆ.
ಎನ್ಡಿಆರ್ ಎಫ್ ತಂಡ ರಕ್ಷಣಾ ಕಾರ್ಯಕ್ಕೆ ಆಗಮಿಸಿದ್ದು ಒಂದು ಬೋಟ್ ನ ಮೂಲಕ ಜನರನ್ನು ಕರೆತರಲಾಗುತ್ತಿದೆ. ಈಗಾಗಲೇ 23 ವಿದೇಶಿ ಪ್ರವಾಸಿಗರ ಪೈಕಿ ಸವನ್ನಾ, ಮಿಶೈಲ್, ಗೇಬ್ರಿಯಲ್ ಎಂಬ ಮೂವರು ಪ್ರವಾಸಿಗರು ಸೇರಿದಂತೆ 10 ಕ್ಕೂ ಹೆಚ್ಚು ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಸ್ಥಳದಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ ಸೇರಿದಂತೆ ಅನೇಕ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಇನ್ನು ವಿರುಪಾಪುರಗಡ್ಡೆಯಿಂದ ಸುರಕ್ಷಿತವಾಗಿ ಹೊರ ಬಂದ ಅಮೆರಿಕ ಮತ್ತು ಜರ್ಮನಿಯ ಸವನ್ನಾ ಹಾಗೂ ಮಿಶೈಲ್ ಮಾತನಾಡಿ, ಊಟ ಮಾಡಲು ಶನಿವಾರ ಸಂಜೆ ವಿರುಪಾಪುರಗಡ್ಡೆಗೆ ತೆರೆಳಿದ್ದೆವು. ಆದರೆ, ಪ್ರವಾಹ ಅಷ್ಟೊಂದು ಪ್ರಮಾಣದಲ್ಲಿ ಬರುತ್ತದೆ ಎಂದು ಕೊಂಡಿರಲಿಲ್ಲ. ಎನ್ಡಿಆರ್ ಎಫ್ ತಂಡ ನಮ್ಮನ್ನು ಇಂದು ಸುರಕ್ಷಿತವಾಗಿ ರಕ್ಷಿಸಿದೆ ಎಂದು ಧನ್ಯವಾದ ಹೇಳಿದರು.