ಕುಷ್ಟಗಿ(ಕೊಪ್ಪಳ) : ಹಾವೇರಿಯಲ್ಲಿ ಜರಗುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನನ್ನ ತವರು ಜಿಲ್ಲೆಯಲ್ಲಿ ನಿಯೋಜನೆಯಾಗಿದೆ. ಈ ಸಮ್ಮೇಳನದ ಯಶಸ್ವಿಗೆ ಸ್ವಯಂ ಸೇವಕನಾಗಿ ಕಸ ಗೂಡಿಸಲು ತಯಾರಾಗಿದ್ದೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿ, ದೂರದರ್ಶನ ವಾಹಿನಿ ನಿವೃತ್ತ ನಿರ್ದೇಶಕ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.
ನಗರದ ಸರ್ಕ್ಯೂಟ್‌ನಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಹಾವೇರಿ ಸಮ್ಮೇಳನದ ನೀರಿಕ್ಷೆಯಿಂದ ನೋಡುತ್ತಿದ್ದೇನೆ. ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದ ಆಯೋಜನೆಯ ನಿರ್ಧಾರ ತೆಗೆದುಕೊಂಡಿದೆ. ನಾನು ಸಾಹಿತ್ಯ ಪರಿಷತ್ತಿನ ಶಿಸ್ತಿನ ಸಿಪಾಯಿಯಾಗಿದ್ದು, ಹಾವೇರಿ ನಮ್ಮೂರು ಎನ್ನುವ ಹೆಮ್ಮೆ ಇದೆ.
ತವರು ಮನೆಯಲ್ಲಿ ನಡೆಯುವ ಈ ಸಮ್ಮೇಳನದ ಸಂಭ್ರಮಕ್ಕೆ ಶಕ್ತಿ ಮೀರಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವೆ. ಅನೇಕ ದೇಶಗಳನ್ನು ಸಂಚರಿಸಿರುವ ನಾನು, ಅಲ್ಲಿನ ಸಮ್ಮೇಳನಗಳಲ್ಲಿ ಸ್ವಯಂಸೇವಕರು ಕಸಗೂಡಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಅದೇ ರೀತಿ ನಮ್ಮೂರಲ್ಲಿ ನಡೆಯುವ ಸಮ್ಮೇಳನದಲ್ಲಿ ಸ್ವಯಂ ಸೇವಕನಾಗಿ ಕನ್ನಡ ಕೆಲಸವೆಂದು ಗೌರವದಿಂದ ಸೇವೆ ಸಲ್ಲಿಸುವೆ ಎಂದರು.
ಓದಿ : ಅಕ್ರಮ ಗಣಿಗಾರಿಕೆ ಬಗ್ಗೆ ಎಲ್ಲಾ ಜಿಲ್ಲೆಗಳಿಂದ ದೂರು ಬರುತ್ತಿವೆ : ಸಚಿವ ಮುರುಗೇಶ್ ನಿರಾಣಿ
ದೂರದರ್ಶನ ವಾಹಿನಿ ನಿರ್ದೇಶಕನಾಗಿ ನಿವೃತ್ತಿ ಬಳಿಕ ಪುನರ್ವಸತಿಗೆ ಹುದ್ದೆಗಾಗಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆ ಹಿನ್ನೆಲೆ ಗುರಿಯಿಂದ ಬಂದವನಲ್ಲ, ಅಭ್ಯರ್ಥಿ ಎಂದು ಹೇಳಿಕೊಂಡಿಲ್ಲ, ಕನ್ನಡದ ಸೇವಾಕಾಂಕ್ಷಿಯಾಗಿರುವೆ ಎಂದರು.