ಕೊಪ್ಪಳ : ಹಿಂದುಳಿದ ಪ್ರದೇಶವಾಗಿರುವ ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡುತ್ತಿರುವ ವಿಶಿಷ್ಟ ಪೌಷ್ಟಿಕ ಆಹಾರ ಮ್ಯಾಜಿಕ್ ಮಾಡುತ್ತಿದೆ.
ರಾಜ್ಯದಲ್ಲಿ ಅಪೌಷ್ಟಿಕತೆ ಹೆಚ್ಚಿರುವ ಜಿಲ್ಲೆಗಳಲ್ಲಿ ಕೊಪ್ಪಳ ಮೊದಲ ಸ್ಥಾನದಲ್ಲಿತ್ತು. ಕಳೆದ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 1,61,789 ಮಕ್ಕಳ ಪೈಕಿ 31,346 ಮಕ್ಕಳಲ್ಲಿ ಸಾಧಾರಣ ಅಪೌಷ್ಟಿಕತೆ, 785 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಅಪೌಷ್ಟಿಕತೆ ಪರಿಣಾಮವಾಗಿ ಮಕ್ಕಳಲ್ಲಿ ಅನಾರೋಗ್ಯ ಕಾಡುತ್ತದೆ.
ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ನಿರಂತರ ವೈದ್ಯಕೀಯ ಸೇವೆ ಹಾಗೂ ಮಕ್ಕಳಿಗೆ ಅಪೌಷ್ಟಿಕ ಆಹಾರ ನೀಡಲು ಮುಂದಾಗಿದೆ.
ಹೀಗಾಗಿ, ಜಿಲ್ಲೆಯಲ್ಲಿ ಆಗಸ್ಟ್ ಅಂತ್ಯಕ್ಕೆ ಸಾಧಾರಣ ಅಪೌಷ್ಟಿಕ ಇರುವ ಮಕ್ಕಳ ಸಂಖ್ಯೆ 27,421 ಇಳಿದಿದೆ. ಇದರಿಂದಾಗಿ ಐದು ತಿಂಗಳಲ್ಲಿ 3,925 ಮಕ್ಕಳು ಅಪೌಷ್ಟಿಕತೆಯಿಂದ ಹೊರ ಬಂದಿದ್ದಾರೆ. ಇನ್ನು, ಮಾರ್ಚ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 785 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಇತ್ತು. ಈಗ ಈ ಸಂಖ್ಯೆ 625ಕ್ಕೆ ಇಳಿದಿದೆ. 160 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಕಡಿಮೆಯಾದಂತಾಗಿದೆ ಅಂತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು.
ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗಾಗಿ ನೀಡಲಾಗುತ್ತಿರುವ ವಿಶಿಷ್ಟ ಪೌಷ್ಟಿಕ ಆಹಾರ ಇದಕ್ಕೆ ಕಾರಣವಾಗಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳ ತೂಕ, ಎತ್ತರ, ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಮೊಟ್ಟೆ, ಪೌಷ್ಠಿಕ ಆಹಾರ ನೀಡಲಾಗುತ್ತಿದೆ.
ಇದರ ಜೊತೆಗೆ ಜಿಲ್ಲೆಯಲ್ಲಿ ನುಗ್ಗೆ ಸೊಪ್ಪಿನಿಂದ ತಯಾರಿಸಿದ ಮೊರಿಂಗಾ ಎಂಬ ಪೌಡರ ಮಿಶ್ರಿತ ಅಕ್ಕಿ ಹಾಗೂ ಪುಷ್ಠಿ ಎಂಬ ಪೌಷ್ಟಿಕ ಆಹಾರ ಒದಗಿಸುವ ಪೌಡರನ್ನು ನೀಡಲಾಗುತ್ತಿದೆ. ಈ ಕಾರಣದಿಂದಾಗಿ ಜಿಲ್ಲೆಯಲ್ಲಿ ಮಕ್ಕಳಲ್ಲಿನ ಅಪೌಷ್ಟಿಕತೆ ಕಡಿಮೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಮಕ್ಕಳ ತೂಕ, ತೋಳಿನ ಸುತ್ತಳತೆ, ಅವರ ತೂಕಕ್ಕೆ ತಕ್ಕಂತೆ ದೈಹಿಕವಾಗಿ ಎತ್ತರವನ್ನು ನಾಲ್ಕು ಹಂತದಲ್ಲಿ ದಾಖಲಿಸಲಾಗುತ್ತಿದೆ. ಪ್ರತಿ ತಿಂಗಳು ಈ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಹಿರಿಯ ಅಧಿಕಾರಿಗಳಿಗೆ ಸಲ್ಲಿಸುತ್ತಿದ್ದಾರೆ.
ಕೊರೊನಾ ಸೋಂಕಿನ 3ನೇ ಅಲೆಯ ಭೀತಿಯ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಪೌಷ್ಟಿಕ ಮಕ್ಕಳ ಬಗ್ಗೆ ಹೆಚ್ಚು ನಿಗಾವಹಿಸಿರೋದು ಸಹ ಮಕ್ಕಳಲ್ಲಿನ ಅಪೌಷ್ಟಿಕತೆ ಕಡಿಮೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ.