ಕೊಪ್ಪಳ: ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಿಂದ ಕೊರೊನಾ ರೋಗ ನಿಯಂತ್ರಣವಾಗುತ್ತಿಲ್ಲ. ಹೀಗಾಗಿ ಸರ್ಕಾರ ಜನರಿಗೆ ಸಹಾಯ ಮಾಡಿ ಒಂದು ತಿಂಗಳ ಕಾಲ ಸಂಪೂರ್ಣ ಲಾಕ್ಡೌನ್ ಮಾಡಬೇಕು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಒತ್ತಾಯಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ರೋಗಿಗಳಿಗೆ ರೆಮ್ಡೆಸಿವಿರ್, ಆಕ್ಸಿಜನ್, ವೆಂಟಿಲೇಟರ್ ಸಿಗುತ್ತಿಲ್ಲ. ದಿನನಿತ್ಯ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ. ಜನರಿಗೆ ಸಹಾಯ ಮಾಡಿ ರಾಜ್ಯವನ್ನು ಲಾಕ್ಡೌನ್ ಮಾಡಬೇಕು ಎಂದು ಆಗ್ರಹಿಸಿದರು.
ಚಾಮರಾಜನಗರ ದುರಂತದಿಂದ ದೇಶವೇ ಬೆಚ್ಚಿ ಬೀಳುವಂತಾಗಿದೆ. ಬಿಜೆಪಿ ಸರ್ಕಾರ ಜನರ ಸಾವಿನ ಜೊತೆ ಆಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಡಾ.ಸುಧಾಕರ್ ಮಾಹಿತಿ ನೀಡದೆ ಹೋಗುತ್ತಾರೆ. ಬಿಜೆಪಿಯಲ್ಲಿ ಹೊಂದಾಣಿಕೆ ಇಲ್ಲ. ಜಿಲ್ಲಾಧಿಕಾರಿಗಳಿಗೆ ಹಣ ಮತ್ತು ಅಧಿಕಾರ ಕೊಡಬೇಕು. ಅವರು ಆಕ್ಸಿಜನ್, ಬೆಡ್ ವ್ಯವಸ್ಥೆ ಮಾಡಬೇಕು. ಕೊಪ್ಪಳ ಜಿಲ್ಲೆಯಲ್ಲಿ ನಾನು 50 ಆಕ್ಸಿಜನ್ ಬೆಡ್ ಹಾಗೂ ವೆಂಟಿಲೇಟರ್ ಕೊಡಲಿದ್ದೇನೆ ಎಂದರು.
ಇದನ್ನೂ ಓದಿ: ಕೊರೊನಾ ಪಾಸಿಟಿವ್: ಸೋಂಕಿತನ ಬಿಟ್ಟು ಅದೇ ಹೆಸರಿನ ಬೇರೆ ವ್ಯಕ್ತಿಯ ಹಿಂದೆ ಅಲೆದಾಡಿದ ಸಿಬ್ಬಂದಿ
ಬೆಂಗಳೂರಲ್ಲಿ ಬೆಡ್ ಮಾರಾಟವಾಗುತ್ತಿವೆ. ಸರ್ಕಾರ ಏನು ಮಾಡುತ್ತಿದೆ?. ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದ ಬೆಡ್ ಬ್ಲಾಕಿಂಗ್ ಹಗರಣದ ಕುರಿತು ಸರ್ಕಾರ ಏನು ಕ್ರಮ ಕೈಗೊಂಡಿದೆ?. ವಿಡಿಯೋ ಕಾನ್ಪರೆನ್ಸ್ ಮಾಡ್ತಾರೆ, ಅದ್ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ. ಇನ್ನೊಂದಿಷ್ಟು ದಿನಕ್ಕೆ ನಮಗೆ ವೈದ್ಯರೇ ಸಿಗುವುದಿಲ್ಲ. ನಮ್ಮ ಜಿಲ್ಲೆಗೆ ಪಕ್ಕದ ನಾಲ್ಕೈದು ಜಿಲ್ಲೆಗಳಿಂದ ರೋಗಿಗಳು ಬರುತ್ತಿದ್ದಾರೆ. ಬೆಡ್ ಕೊಡಿಸುವಂತೆ ನಮಗೂ ನಿತ್ಯ ಫೋನ್ ಕರೆಗಳು ಬರುತ್ತಿದೆ ಎಂದು ಹಿಟ್ನಾಳ್ ಹೇಳಿದರು.