ಗಂಗಾವತಿ: ಸರ್ಕಾರಿ ಅನುದಾನದಲ್ಲಿ ನಿರ್ಮಾಣವಾಗುವ ಯಾವುದೇ ಕಾಮಗಾರಿ, ಕಟ್ಟಡಗಳಲ್ಲಿ ಲೋಪದೋಷ ಅಥವಾ ಗುಣಮಟ್ಟದಲ್ಲಿ ವ್ಯತ್ಯಾಸವಾದರೆ ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶಾಸಕ ಪರಣ್ಣ ಮುನವಳ್ಳಿ ಎಚ್ಚರಿಕೆ ನೀಡಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ (ಕೆಕೆಡಿಬಿ) ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಮಂಜೂರಾದ 35 ಲಕ್ಷ ರೂಪಾಯಿ ಮೊತ್ತದಲ್ಲಿ ಇಲ್ಲಿನ ವಾಲ್ಮಿಕಿ ವೃತ್ತದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಒಟ್ಟು 40 ಲಕ್ಷ ರೂ ಅನುದಾನ ಮಂಜೂರಾಗಿದ್ದು, ಈ ಪೈಕಿ ತೆರಿಗೆ, ಜಿಎಸ್ಟಿ, ಸಿಜಿಎಸ್ಟಿಯಂತ ತೆರಿಗೆ ಕಡಿತಗಳು ಸೇರಿ ಸುಮಾರು ನಾಲ್ಕರಿಂದ ಐದು ಲಕ್ಷ ಹಣ ಕಡಿತವಾಗುತ್ತದೆ. ಹೀಗಾಗಿ 35 ಲಕ್ಷ ಮೊತ್ತದಲ್ಲಿ ಕಾಮಗಾರಿ ನಡೆಯಲಿದೆ. ಕಾಲಹರಣಕ್ಕೆ ಆಸ್ಪದವಿಲ್ಲದಂತೆ ನಿಗಧಿತ ಅವಧಿಯಲ್ಲಿ ಕಾಮಗಾರಿ ಮುಗಿಸಿಕೊಡಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದ ಶಾಸಕ, ಗುಣಮಟ್ಟದ ಬಗ್ಗೆ ವಾರ್ಡನ ಮುಖಂಡರು ಹಾಗೂ ಯುವಕರು ನಿಗಾವಹಿಸಬೇಕು ಎಂದು ಮನವಿ ಮಾಡಿದರು.