ಕುಷ್ಟಗಿ(ಕೊಪ್ಪಳ): ತಾಲೂಕಿನ ಜಹಗೀರಗುಡದೂರ ಗ್ರಾಮದ ರಾಜೀವ್ ಗಾಂಧಿ ಸೇವಾ ಕೇಂದ್ರ ಹಾಗೂ ನೂತನ ಗ್ರಾಮ ಪಂಚಾಯಿತಿ ಕಟ್ಟಡವನ್ನು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಲೋಕಾರ್ಪಣೆಗೊಳಿಸಿದರು.
ಜಹಗೀರಗುಡದೂರ ಗ್ರಾಮದಲ್ಲಿ 2018-19ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ಅಂದಾಜು ಮೊತ್ತ ₹16.25 ಲಕ್ಷದಲ್ಲಿ ನಿರ್ಮಾಣವಾದ ಕಟ್ಟಡಗಳನ್ನು ಇಂದು ಲೋಕಾರ್ಪಣೆ ಅವರು ಮಾಡಿ ಮಾತನಾಡಿದರು.
ಕೊರೊನಾ ಭೀತಿ ಹಿನ್ನೆಲೆ ವಿವಿಧ ಭಾಗಗಳಿಗೆ ಕೆಲಸಕ್ಕೆಂದು ತೆರಳಿದ್ದ ಜನರು ತಮ್ಮ ಮೂಲ ಸ್ಥಳಕ್ಕೆ ಮರಳಿದ್ದು, ಅವರೆಲ್ಲರಿಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ವಿವಿಧ ಕ್ರಿಯಾಯೋಜನೆ ತಯಾರಿಸಿ ಕೆಲಸ ನೀಡಬೇಕು ಎಂದರು.
ಈ ಬಗ್ಗೆ ಪಿಡಿಓ ನಿಂಗಪ್ಪ ಮೂಲಿಮನಿ ಮಾತನಾಡಿ, 14ನೇ ಹಣಕಾಸು ಯೋಜನೆ ಹಾಗೂ ವಿದ್ಯುತ್ ಉಳಿತಾಯ ಖಾತೆ ಅನುದಾನದ ಅಡಿ ಪಂಚಾಯಿತಿ ಆವರಣದಲ್ಲಿ ಮಳೆ ನೀರು ಸಂಗ್ರಹ, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಶೌಚಾಲಯ, ಆವರಣದಲ್ಲಿ ಬ್ರಿಕ್ಸ್ ಜೋಡಣೆ, ಸಭಾಂಗಣ ನಿರ್ಮಾಣ ಮಾಡಲಾಗಿದೆ. ಮುಂದೆ ಸಾರ್ವಜನಿಕರಿಗೆ ಒಂದೇ ಸೂರಿನಲ್ಲಿ ಎಲ್ಲ ಸೌಲಭ್ಯ ನೀಡುವ ಉದ್ದೇಶವಿದೆ ಎಂದರು.
ಇದೇ ಸಂದರ್ಭದಲ್ಲಿ 14ನೇ ಹಣಕಾಸು ಯೋಜನೆ ಅಡಿ 15 ಜನ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.