ಕುಷ್ಟಗಿ(ಕೊಪ್ಪಳ): ತಾಲೂಕಿನ ಕೇಸೂರು ಗ್ರಾಮದಲ್ಲಿ ಕೊರೊನಾ ಪ್ರಕರಣ ದಾಖಲಾಗಿರುವ ಹಿನ್ನೆಲೆ ಕಂಟೈನ್ಮೆಂಟ್ ವ್ಯಾಪ್ತಿಯ ಮನೆಗಳ ನಿವಾಸಿಗಳಿಗೆ ಅಗತ್ಯವಾಗಿರುವ ದಿನಸಿ ಪದಾರ್ಥ, ಹಾಲು, ತರಕಾರಿ, ನೀರು ಸೇರಿದಂತೆ ಇನ್ನಿತರ ವಸ್ತುಗಳನ್ನು ಗ್ರಾಮ ಪಂಚಾಯಿತಿ ನೇರವಾಗಿ ಮನೆಗಳಿಗೆ ತಲುಪಿಸುವ ಕಾರ್ಯ ನಿರ್ವಹಿಸಿಸಲಿದ್ದು, ಅಧಿಕಾರಿಗಳು ನಿರ್ಲಕ್ಷ ಧೋರಣೆ ತೋರದೆ ಸೇವೆ ಸಲ್ಲಿಸಬೇಕು ಎಂದು ಶಾಸಕ ಅಮರೇಗೌಡ ಬಯ್ಯಾಪುರ ಪಿಡಿಓ ಅವರಿಗೆ ಸೂಚಿಸಿದರು.
ತಾಲೂಕಿನ ಕೇಸೂರು ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ಕಂಟೈನ್ಮೆಂಟ್ ಝೋನ್ ನಲ್ಲಿರುವ ನಿವಾಸಿಗಳು ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ರಸ್ತೆಗೆ ಬರಬಾರದು. ತಮಗೆ ಬೇಕಾದಂತಹ ವಸ್ತುಗಳನ್ನು ಮನೆಗೆ ತಲುಪಿಸುವ ಕಾರ್ಯ ಗ್ರಾಮ ಪಂಚಾಯಿತಿ ನಿರ್ವಹಿಸಲಿದ್ದು, ಸಣ್ಣ ಪುಟ್ಟ ವ್ಯತ್ಯಾಸವಾದರೂ ಕೊಂಚ ಸಹಕರಿಸಿರಿಸಿಕೊಂಡು ಮನೆಯಲ್ಲೇ ಇರಿ ಎಂದು ಮನವಿ ಮಾಡಿದರು.
ಸಾರ್ವಜನಿಕರ ಮನೆಗಳಿಗೆ ದಿನಸಿ ವಸ್ತುಗಳನ್ನು ತಲುಪಿಸಲು ವಾಹನ, ತರಕಾರಿಗಳನ್ನು ತಲುಪಿಸಲು ತಳ್ಳುಗಾಡಿಗಳನ್ನು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ದೋಟಿಹಾಳ ಗ್ರಾಮವನ್ನು ಬಫರ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಈ ಗ್ರಾಮದಲ್ಲಿ ಕಿರಾಣಿ ಅಂಗಡಿ, ತರಕಾರಿ, ಹಾಲು ಸೇರಿದಂತೆ ಇನ್ನಿತರ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಕುಷ್ಟಗಿ ಮತ್ತು ಇಲಕಲ್ ಸಂಪರ್ಕಿಸುವ ರಸ್ತೆಗೆ ಬ್ಯಾರಿಕೇಡ್ ಹಾಕಲಾಗಿದ್ದು, ಅವುಗಳನ್ನು ತೆರವುಗೊಳಿಸುವಂತೆ ತಹಶೀಲ್ದಾರ ಎಂ. ಸಿದ್ದೇಶ ಅವರಿಗೆ ಸೂಚಿಸಿದರು.