ಗಂಗಾವತಿ: ತುಂಗಭದ್ರಾ ಜಲಾಶಯದ ಎಡೆದಂಡೆ ವ್ಯಾಪ್ತಿಯ ಜಮೀನುಗಳ 2ನೇ ಬೆಳೆಗೆ ಮಾರ್ಚ್ 30ರವರೆಗೆ ನೀರುವ ಬಿಡುವ ಬಗ್ಗೆ ಈ ಮೊದಲು ನಿರ್ಧರಿಸಲಾಗಿತ್ತು. ಆದರೆ, ಈಗ ಮಾರ್ಚ್ 30 ಅಲ್ಲ. ಏಪ್ರಿಲ್ 10ರವರೆಗೆ ನೀರು ಬಿಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಬಸವರಾಜ ದಡೇಸುಗೂರು ಹೇಳಿದರು.
ಕಾರಟಗಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ರೈತರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಜಲಾಶಯದಲ್ಲಿ ನೀರಿನ ಲಭ್ಯತೆ ಆಧರಿಸಿ ಜನವರಿಯಲ್ಲಿ ಸಭೆ ಕರೆದು ನೀರಿನ ಬಗ್ಗೆ ನಿರ್ಣಯ ಕೈಗೊಳ್ಳುವ ಉದ್ದೇಶವಿತ್ತು. ಆದರೆ, ಸದ್ಯದ ಸ್ಥಿತಿಯಲ್ಲಿ ಏಪ್ರಿಲ್ 10ರವರೆಗೂ ಎಡದಂಡೆಗೆ ನೀರು ಬಿಡುತ್ತೇವೆ. ಅಗತ್ಯ ಬಿದ್ದರೆ ಸಿಎಂ ಕೈಕಾಲು ಹಿಡಿದಾದರೂ ನೀರು ತಂದು ಕೊಡುತ್ತೇನೆ. ಈ ಬಗ್ಗೆ ರೈತರು ಚಿಂತೆ ಮಾಡುವ ಅಗತ್ಯವಿಲ್ಲ ಎಂದ್ಹೇಳಿದರು.