ಕೊಪ್ಪಳ: ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಹೇಳಿದ್ದಾರೆ.
ಓದಿ: BSY ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ: ಸಂಸದ ಪ್ರತಾಪ್ ಸಿಂಹ
ಈ ಮೂಲಕ ದಡೇಸೂಗೂರು ಅವರು ಯಡಿಯೂರಪ್ಪ ಅವರ ಪರ ಬ್ಯಾಟ್ ಬೀಸಿದ್ದಾರೆ. ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಮಾತನಾಡಿರುವ ಅವರು, ಚುನಾವಣೆ ಗೆಲ್ಲಲಾಗದೆ ಸಚಿವರಾದವರು ಮುಖ್ಯಮಂತ್ರಿ ಬದಲಾವಣೆ ಮಾಡುವುದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಇಡೀ ಜೀವನವನ್ನು ಬಿಜೆಪಿಗೆ ತ್ಯಾಗ ಮಾಡಿದ್ದು, ಅವರೇ ಸಿಎಂ ಆಗಿರಬೇಕು. ಅವರ ನೇತೃತ್ವದಲ್ಲಿಯೇ ನಾವೆಲ್ಲ ಕೆಲಸ ಮಾಡೋಣ, ನಾವೆಲ್ಲ ಅವರಿಗೆ ಸಾಥ್ ಕೊಡುತ್ತೇವೆ. ಸೋಲುಂಡು ಸಚಿವರಾದ ನೀವು ಇಂತಹ ಕೆಟ್ಟ ಕೆಲಸ ಮಾಡಬಾರದು. ಯಡಿಯೂರಪ್ಪ ಬದಲಾವಣೆ ಬಯಸಿರುವ ಕೆಲ ಶಾಸಕರು ಗುಂಪು ಮಾಡಿಕೊಂಡು ದೆಹಲಿಗೆ ಹೋಗಿ ಸುಳ್ಳು ಮಾಹಿತಿ ಕೊಡಬಾರದು ಎಂದರು.
ಗುಂಪುಗಾರಿಕೆ ಮಾಡಿಕೊಂಡು ಯಡಿಯೂರಪ್ಪ ಬದಲಾವಣೆ ಮಾಡುವ ನಿಮ್ಮ ವಿಚಾರವನ್ನು ತಲೆಯಿಂದ ತೆಗೆಯಬೇಕು. ಯಡಿಯೂರಪ್ಪ ಬದಲಾವಣೆ ಅನ್ನುವುದು ಕನಸು, ಅದು ನನಸಾಗುವುದಿಲ್ಲ. ಬಿಎಸ್ವೈ ಅವರ ಕೆಲಸ ನೋಡಿ ನಾವು ಖುಷಿಪಡಬೇಕು ಎಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಕ್ಷವನ್ನು ಸಂಘಟನೆ ಮಾಡುತ್ತಿದ್ದಾರೆ. ವಿಜಯೇಂದ್ರ ನೇತೃತ್ವದಲ್ಲಿ ನಾವು ಪಕ್ಷ ಸಂಘಟನೆ ಮಾಡಬೇಕಿದೆ ಎಂದು ಶಾಸಕ ಬಸವರಾಜ ದಡೇಸೂಗೂರು ಹೇಳಿದ್ದಾರೆ.