ಕುಷ್ಟಗಿ(ಕೊಪ್ಪಳ): ಪಕ್ಷ ಬಿಟ್ಟು ಹೋದವರು ಪುನಃ ಕಾಂಗ್ರೆಸ್ ಪಕ್ಷ ಸೇರುವ ಹಿನ್ನೆಲೆಯಲ್ಲಿ ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಇನ್ನೂ ಸಹ ಪಕ್ಷ ಸೇರ್ಪಡೆಗೆ ಅರ್ಜಿ ಹಾಕಿಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ನಮ್ಮ ಪಕ್ಷ ಸೇರಲು ಯೋಗ್ಯರು ಎಂಬುದನ್ನು ವಿಚಾರಿಸಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದರು.
ದಲಿತರಿಗೆ ಸಿಎಂ ಸ್ಥಾನ ಕೇಳುವುದು ತಪ್ಪಲ್ಲ: ನಮ್ಮ ಪಕ್ಷದಲ್ಲಿ ಯಾರೂ ಸಿಎಂ ಸ್ಥಾನ, ಅಭ್ಯರ್ಥಿ ಬಗ್ಗೆ ಮಾತನಾಡಬಾರದು ಎಂಬ ಸಂದೇಶವನ್ನು ಹೈ ಕಮಾಂಡ್ ರವಾನಿಸಿದೆ. ದಲಿತರಿಗೆ ಸಿಎಂ ಕೇಳುವುದು ತಪ್ಪಲ್ಲ. ದಲಿತರು ಇಲ್ಲಿಯವರೆಗೂ ಸಿಎಂ ಆಗಿಲ್ಲ ಎಂದರು. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಸ್ವಾತಂತ್ರ್ಯವಿದೆ. ನಾನೂ ಕೂಡ ಮಂತ್ರಿ ಆಗಬೇಕು ಅನಿಸುತ್ತೆ. ಅವಕಾಶ ಸಿಕ್ಕರೆ ಸಿಎಂ ಸಹ ಆಗಬೇಕು ಎನ್ನುತ್ತೇನೆ ಎಂದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಜಿ.ಪಂಗೆ ಎಸ್ಟಿ ಮೀಸಲು ಇಲ್ಲ:
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಜಿ.ಪಂ. ಪರಿಶಿಷ್ಟ ಪಂಗಡ ಮೀಸಲಾತಿ ಕಲ್ಪಿಸದಿರುವ ಸಂಬಂಧ ಮಾತನಾಡಿದ ಅವರು, ಲೋಕಸಭೆ ವ್ಯಾಪ್ತಿಯಲ್ಲಿ ಒಂದು ಕ್ಷೇತ್ರ ಎಸ್ಸಿ, ಎಸ್ಟಿಗೆ ಮೀಸಲಿತ್ತು. ಅದು ತಿದ್ದುಪಡಿಯಾಗಿದೆ. ಜನ ವಾಸಿಸುವ ಆಧಾರದ ಮೇಲೆ ವಿಧಾನಸಭೆ ಕ್ಷೇತ್ರದ ಮೀಸಲಾತಿ ಬಂದಿದ್ದು, 2008ರಲ್ಲಿ ಹೊಸ ಕ್ಷೇತ್ರಗಳ ಮೀಸಲಾತಿ ಪ್ರಕಟವಾದಾಗ ರಾಯಚೂರು, ಬಳ್ಳಾರಿ ಜಿಲ್ಲೆಯ ಪರಿಶಿಷ್ಟ ಪಂಗಡದವರಿಗೆ ಹೆಚ್ಚು ಸ್ಥಾನಗಳು ಬಂದವು. ಇದಕ್ಕೆ ಚಿತ್ರದುರ್ಗ, ತುಮಕೂರು ಜಿಲ್ಲೆಯವರು ಹೋರಾಟ ಮಾಡಿ ಸ್ಥಾನ ಕಲ್ಪಿಸಬೇಕೆಂದು ಸುಪ್ರೀಂ ಕೋರ್ಟ್ ಮೊರೆ ಹೋದರು. ಆದರೆ ಸರ್ಕಾರ ಒಪ್ಪಲಿಲ್ಲ. ಸರ್ಕಾರ ನೀತಿ ನಿಯಮ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕೊಪ್ಪಳ ವಿಧಾನಸಭೆ ಕ್ಷೇತ್ರದಲ್ಲಿ ಜಿ.ಪಂ. ಪರಿಶಿಷ್ಟ ಪಂಗಡದ ಮೀಸಲಾತಿ ಸಿಕ್ಕಿರಲಿಕ್ಕಿಲ್ಲ ಎಂದು ಶಾಸಕ ಬಯ್ಯಾಪುರ ಹೇಳಿದ್ರು.