ಕುಷ್ಟಗಿ (ಕೊಪ್ಪಳ) : ಸಾಮಾಜಿಕ ಭದ್ರತಾ ಯೋಜನೆಯಲ್ಲಿ ವಯೋವೃದ್ಧರಿಗೆ ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷೆ, ವಿಧವಾ ವೇತನ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಯೋಜನೆಯ ವಯೋವೃದ್ಧ ಫಲಾನುಭವಿಗಳು ಸಕಾಲಿಕ ಬಿಡುಗಡೆಗೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರನ್ನು ಒತ್ತಾಯಿಸಿದರು.
ಆಧಾರ ಜೋಡಣೆಯ ಖಾತೆಯ ವಿವರ ನೀಡಿದ್ದು, ಮಾಸಾಶನ ಪಾವತಿಯಾಗದೇ ಇರುವುದು ಕುಟುಂಬ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ಬಗ್ಗೆ ವಯೋವೃದ್ಧ ಫಲಾನುಭವಿಗಳು ಶಾಸಕರಲ್ಲಿ ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಶಾಸಕ ಬಯ್ಯಾಪೂರ, ಇತ್ತೀಚೆಗೆ ಹಾವೇರಿ ಜಿಲ್ಲೆಯಲ್ಲಿ ಕೊರೊನಾದಿಂದ ತೀರಿದ ತಂದೆಯನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿರುವುದನ್ನು ನೆನಪಿಸುತ್ತಾ, ಕೂಡಲೇ ಮಾಸಾಶನ ಬಿಡುಗಡೆಗೆ ಸಂಬಂಧಿಸಿದಂತೆ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದರು.
ತಹಶೀಲ್ದಾರ್ ಎಂ.ಸಿದ್ದೇಶ ಮಾತನಾಡಿ, ತಾಲೂಕಿನ 24 ಸಾವಿರ ಫಲಾನುಭವಿಗಳ ಪೈಕಿ 400 ಮಂದಿಯ ಆಧಾರ ಜೋಡಣೆ ಇರುವ ಖಾತೆ ಹೊಂದಾಣಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆಗಿರುವ ತಾಂತ್ರಿಕ ಸಮಸ್ಯೆ ನಿವಾರಿಸಿ ಮಾಸಾಸನ ಪಾವತಿಗೆ ಕ್ರಮದ ಭರವಸೆ ನೀಡಿದರು.