ಕೊಪ್ಪಳ: ಪ್ರಸ್ತುತ ರಾಜ್ಯ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ಎಂದು ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯ ಸರ್ಕಾರ ಹೈದರಾಬಾದ್ ಕರ್ನಾಟಕವನ್ನು ಕರ್ನಾಟಕ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದೆ. ಆದರೆ, ಈ ಭಾಗದಲ್ಲಿ ಯಾವುದೇ ಕಲ್ಯಾಣವಾಗಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಈಗ ಗೊಂದಲದ ಗೂಡಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಏನಾದರೂ ಕೇಳಿದರೆ ಅಲ್ಲಿ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಕ್ಯಾಬಿನೆಟ್ ದರ್ಜೆಯ ಸಚಿವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕಾಗಿತ್ತು. ಆದರೆ, ಸರ್ಕಾರ ನಿರ್ಧಾರ ತೆಗೆದುಕೊಂಡು ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಈ ಭಾಗದ ಉಸ್ತುವಾರಿ ಸಚಿವರು ಮಂಡಳಿಯ ಸದಸ್ಯರಾಗಿರುತ್ತಾರೆ. ಶಾಸಕರ ಕೈ ಕೆಳಗೆ ಸಚಿವರು ಮಾಡುವುದಕ್ಕೆ ಆಗುವುದಿಲ್ಲ. ಡಾ. ಡಿ.ಎಂ. ನಂಜುಂಡಪ್ಪ ವರದಿ ಆಧಾರದ ಮೇಲೆ ಕಲ್ಯಾಣ ಕರ್ನಾಟಕಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಈ ಸರ್ಕಾರ ಬಜೆಟ್ನಲ್ಲಿ 1500 ಕೋ.ರೂ ಘೋಷಣೆ ಮಾಡಿತ್ತು. ಘೋಷಣೆಯಂತೆ ಹಣವನ್ನು ಬಿಡುಗಡೆ ಮಾಡಿಲ್ಲ. ಕ್ರಿಯಾಯೋಜನೆ ಪ್ರಸ್ತಾವನೆ ಸಲ್ಲಿಸಿದರೂ ಸರ್ಕಾರ ಮಂಜೂರಾತಿ ನೀಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದರು.
ಇನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಪ್ರಾದೇಶಿಕ ನಿಧಿಯನ್ನು ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಬೇಕು. ಶೇ. 1 ರಷ್ಟು ಇರುವ ಆಡಳಿತ ವೆಚ್ಚ ಕೇವಲ ಕಲಬುರ್ಗಿ ಕಚೇರಿಗೆ ಮಾತ್ರ ಸೀಮಿತವಾಗಿದೆ. ಈ ಭಾಗದಲ್ಲಿ ಒಬ್ಬ ಅಧಿಕಾರಿಯನ್ನು ನೇಮಕ ಮಾಡಬೇಕು. ಕಲ್ಯಾಣ ಕರ್ನಾಟಕ ಮಂಡಳಿಗೆ ಇನ್ನೂ ಸಂಪೂರ್ಣವಾಗಿ ಸದಸ್ಯರ ನೇಮಕವಾಗಿಲ್ಲ. ಈ ಸರ್ಕಾರ ಬಂದ ಮೇಲೆ ಇನ್ನೂ ಒಂದು ಸಭೆಯೂ ಆಗಿಲ್ಲ. ಪೂರ್ಣಪ್ರಮಾಣದ ಆಡಳಿತ ಮಂಡಳಿಯನ್ನು ರಚಿಸಿ ಸಭೆ ಕರೆಯಬೇಕು. 371ನೇ ಜೆ ಅನುಷ್ಠಾನದ ಬಳಿಕ ಕಲ್ಯಾಣ ಕರ್ನಾಟಕ ಭಾಗದಲ್ಲಾಗುವ ನೇಮಕಕ್ಕೆ ಯಾವುದೇ ಆರ್ಥಿಕ ದಿಗ್ಬಂಧನ ವಿಧಿಸುವಂತಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ನೇಮಕಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ತಾಂತ್ರಿಕ ಕೋಶ ಸ್ಥಾಪಿಸಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಆಗ್ರಹಿಸಿದರು.