ಗಂಗಾವತಿ(ಕೊಪ್ಪಳ): ಹೊಟ್ಟೆ ನೋವು ಎಂದು ತಪಾಸಣೆಗಾಗಿ ಆಸ್ಪತ್ರೆಗೆ ಹೋದ ವೇಳೆ ಅಪ್ರಾಪ್ತೆ ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಕಾರಟಗಿ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಾಲಕಿಯ ಪೋಷಕರು ದೂರು ನೀಡಿದ್ದಾರೆ.
ಕಾರಟಗಿ ಪಟ್ಟಣದ ನಜೀರಸಾಬ ಕಾಲೋನಿಯ 17 ವರ್ಷದ ಬಾಲಕಿ ನ.23 ರಂದು ತೀವ್ರ ಹೊಟ್ಟೆ ನೋವು ಎಂದು ಪೋಷಕರಿಗೆ ತಿಳಿಸಿದ್ದಳು. ಬಳಿಕ ಪೋಷಕರು ಆಕೆಯನ್ನು ಚಿಕಿತ್ಸೆಗಾಗಿ ಕಾರಟಗಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ತಪಾಸಣೆ ನಡೆಸಿದ ವೈದ್ಯರು, ಬಾಲಕಿ 7 ತಿಂಗಳು ಗರ್ಭಿಣಿ ಎಂದು ತಿಳಿಸಿದ್ದಾರೆ. ಇದರಿಂದ ವಿಚಲಿತರಾದ ಪೋಷಕರು ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದ್ದಾರೆ. ಆದರೆ ಬಾಲಕಿ ಯಾವುದೇ ಮಾಹಿತಿ ನೀಡಿಲ್ಲ. ಬಾಲಕಿಗೆ ಹೊಟ್ಟೆ ನೋವು ಇದ್ದುದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿಯೇ ಇದ್ದರು. ನ. 25ರಂದು ಮಧ್ಯಾಹ್ನ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಜನಿಸಿದ ಕೆಲವೇ ಕ್ಷಣಗಳಲ್ಲಿ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ನಮ್ಮ ಮಗಳು ಕಾಲೇಜಿಗೆ ಹೋಗಿರುವುದು ಬಿಟ್ಟು ಬೇರೆ ಎಲ್ಲಿಗೂ ತೆರಳಿಲ್ಲ. ಘಟನೆಗೆ ಕಾರಣರಾದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಾಲಕಿಯ ಪೋಷಕರು ಗಂಗಾವತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.