ಕೊಪ್ಪಳ: ಅಕ್ರಮ ಗಣಿಗಾರಿಕೆ ತಡೆಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಸಚಿವ ಸಿ.ಸಿ. ಪಾಟೀಲ್, ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಆರೋಪಗಳು ಕೇಳಿ ಬಂದಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಈಗಾಗಲೇ ಎರಡು ಭಾರಿ ಸಭೆ ನಡೆಸಲಾಗಿದೆ. ಸಾಮಾನ್ಯ ಜನರಿಗೆ ಸರಳ ರೀತಿಯಲ್ಲಿ ಮರಳು ಸಿಗಬೇಕು ಎಂಬುದು ಸರ್ಕಾರದ ಉದ್ದೇಶ ಎಂದರು.
ಗಣಿಗಾರಿಕೆಯಿಂದ ಪರಿಸರ ಹಾಳಾಗುತ್ತದೆ. ಈ ಕಾರಣದಿಂದಾಗಿ ಜನರಲ್ಲಿ ಕಾನೂನಿನ ತಿಳುವಳಿಕೆ ಹಾಗೂ ಪರಿಸರ ಪ್ರಜ್ಞೆ ಮೂಡಿಸಿ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಖನಿಜ ಸಂಪತ್ತನ್ನು ತೆಗೆದು ರಾಜ್ಯ ಹಾಗೂ ರಾಷ್ಟ್ರದ ಬೊಕ್ಕಸಕ್ಕೆ ರಾಜಸ್ವ ಬರುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತೇವೆ ಎಂದು ಹೇಳಿದರು.
ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂಬ ಹೆಸರು ಮರುನಾಮಕರಣ ಮಾಡಿರುವ ಕುರಿತು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಏನು ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಕಲ್ಯಾಣ ಕರ್ನಾಟಕ ಎಂಬ ಹೆಸರು ಬದಲಾವಣೆಯಿಂದ ಈ ಭಾಗದ ಜನರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದರು.
ಸಚಿವ ಸಂಪುಟ ಇನ್ನೂ ಸಂಪೂರ್ಣವಾಗಿ ವಿಸ್ತರಣೆಯಾಗಿಲ್ಲ. ಇನ್ನೂ 16 ಸ್ಥಾನಗಳಿವೆ. ಉಳಿದ ಸ್ಥಾನಗಳನ್ನು ಅನರ್ಹರಿಗೆ ಕೊಡುತ್ತೇವೆ ಎಂದು ನಾವು ಎಲ್ಲಿ ಹೇಳಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ನನ್ನ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳಿ ಎಂದು ಜಾರಿಕೊಂಡರು.