ಕೊಪ್ಪಳ: ಮೆರಿಟ್ ಇಲ್ಲದೇ ಸಿವಿಲ್ ಸರ್ವಿಸ್ಗೆ ಆಯ್ಕೆಯಾಗುವುದಕ್ಕೆ ಸಾಧ್ಯವಿಲ್ಲ. ಈ ಸಿವಿಲ್ ಸರ್ವಿಸ್ನಲ್ಲಿ ಯಾವ ರಾಜ್ಯದವರು ಹೆಚ್ಚು ಇದ್ದಾರೆ?. ಹೆಚ್.ಡಿ ಕುಮಾರಸ್ವಾಮಿ ಅವರು ರಾಜಕೀಯವಾಗಿ ಮಾತನಾಡುತ್ತಾರೆ ಅಷ್ಟೆ. ಅವರ ಉದ್ದೇಶ ಏನಿದೆ ಎಂಬುದು ನನಗೆ ಗೊತ್ತಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಆರ್‌ಎಸ್ಎಸ್ ಬಗ್ಗೆ ಗೊತ್ತಿದೆ. ನಾನು ಏನು ಹೇಳುತ್ತೇನೆ ಅದು ಅವರಿಗೆ ಗೊತ್ತಿಲ್ಲ ಅಂತಾ ಅಲ್ಲ ಎಂದರು.
ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುವ ಶಕ್ತಿ ಇದೆ:
ಮಾಜಿ ಸಚಿವ ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶ್ರೀರಾಮುಲು ನಾನು ಯಾವುದೇ ಸ್ವಾರ್ಥವಿಟ್ಟುಕೊಂಡು ರಾಜಕಾರಣ ಮಾಡುವುದಿಲ್ಲ. ಜನಾರ್ದನ ರೆಡ್ಡಿ ಅವರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುವ ಶಕ್ತಿ ಇದೆ. ಇಲ್ಲೇ ಬರಬೇಕು ಎಂಬ ಅನಿವಾರ್ಯತೆ ಯಾರಿಗೂ ಇಲ್ಲ. ಅವರು ರಾಜಕಾರಣಕ್ಕೆ ಬರುವುದಿಲ್ಲ ಎಂದರೆ ಈ ಪ್ರಶ್ನೆ ಉದ್ಭವವಾಗುವುದಿಲ್ಲ ಎಂದರು.
ವೇತನ ನೀಡಲು ಕ್ರಮ: ಸಾರಿಗೆ ನೌಕರರ ವೇತನ ವಿಳಂಬ ವಿಚಾರ ಕುರಿತಂತೆ ಬೆಳಗ್ಗೆಯಷ್ಟೇ ಹಣಕಾಸು ಇಲಾಖೆ ಜತೆ ಮಾತನಾಡಿದ್ದೇನೆ. ಹಬ್ಬದೊಳಗಾಗಿ ವೇತನ ನೀಡಲು ಕ್ರಮ ವಹಿಸುತ್ತೇವೆ ಎಂದರು.
ಒಟ್ಟಾಗಿ ಕೆಲಸ ಮಾಡುತ್ತೇವೆ: ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ನಂತರ 3 ಮಹಾನಗರ ಪಾಲಿಕೆ ಗೆದ್ದಿದ್ದೇವೆ. ಯಾರೇ ಆಗಿರಬಹುದು, ಏನೇ ಆಗಿರಬಹುದು. ಆದರೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸಚಿವ ಶ್ರೀರಾಮುಲು ಹೇಳಿದರು.