ಕೊಪ್ಪಳ: ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭಾನುವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಬಿಜೆಪಿಯನ್ನು ಅಡ್ರೆಸ್ ಇಲ್ಲದಂತೆ ಮಾಡುವುದಕ್ಕಾಗಿಯೇ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ. ನಿಗದಿತ ಯೋಜನೆಗಳನ್ನು ಆರಂಭ ಮಾಡುತ್ತೇವೆ. ಬಿಜೆಪಿಯವರು ಅವರ ಆಡಳಿತ ಅವಧಿಯಲ್ಲಿ ಎಂದು ನುಡಿದಂತೆ ನಡೆದಿಲ್ಲ. ಹಿಂದಿನಿಂದಲೂ ಅವರು ಹೇಳಿದ ಘೋಷಣೆಗಳನ್ನು ಜಾರಿಗೊಳಿಸಿಲ್ಲ ಎಂದು ಆರೋಪಿಸಿದರು.
ಇದೇ ಕಾರಣಕ್ಕೆ ಅವರನ್ನು ಜನ ಮನೆಗೆ ಕಳುಹಿಸಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುವುದಾಗಿ ಹೇಳಿತ್ತು. 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದೆಲ್ಲ ಹೇಳಿದ್ದರು. ಆದರೆ, ಎಲ್ಲಿ ಆಗಿದೆ? ಬಿಜೆಪಿಯವರು ಸುಳ್ಳುಗಾರರು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಒಂದೊಂದೇ ಯೋಜನೆಗಳಿಗೆ ಚಾಲನೆ ನೀಡುತ್ತೇವೆ. ಹಿಂದಿನ ಸರ್ಕಾರದದಲ್ಲಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಈಗ ವಿದ್ಯುತ್ ಬಿಲ್ ಹೆಚ್ಚು ಬಂದಿದೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯದ ಜನರಿಗೆ ವಿದ್ಯುತ್ ಬಿಲ್ ಪಾವತಿಸಬೇಡಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ರಿಕ್ರಿಯಿಸಿ, ಸಾವು ಸಂಭವಿಸಿದ ಕುಟುಂಬಗಳಿಗೆ ಸಿಎಂ ಜೊತೆ ಚರ್ಚಿಸಿ ಪರಿಹಾರ ಕೊಡಿಸಲಾಗುವುದು. ನೀರು ಸರಬರಾಜು ವ್ಯವಸ್ಥೆಯಲ್ಲಿ ಅವೈಜ್ಞಾನಿಕ ಕಾಮಗಾರಿ ಮಾಡಲಾಗಿದೆ. ಸಂಬಂಧಪಟ್ಟ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನು ನಿತ್ಯ ಜನ ಜುಂಗುಳಿಯಿಂದಿರುತ್ತಿದ್ದ ಬಸ್ ನಿಲ್ದಾಣದಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು, ತಳಿರು ತೋರಣಗಳಿಂದ ಶೃಂಗಾರ ಗೊಂಡಿದ್ದ ಬಸ್ಗಳು ಮತ್ತು ಉಚಿತ ಪ್ರಯಾಣ ಮಾಡಲು ಆಗಮಿಸಿದ್ದ ಮಹಿಳೆಯರು ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದ ಆವರಣದಲ್ಲಿ ಕಂಡುಬಂದರು. ನೂತನ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಏಕಕಾಲಕ್ಕೆ ಚಾಲನೆ ಸಿಗುವ ಸಂಭ್ರಮಕ್ಕೆ ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದ ಆವರಣವು ಸಹ ಸಾಕ್ಷಿಯಾಯಿತು.
ಪೂರ್ವ ನಿಗದಿಯಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಕೊಪ್ಪಳ ನಗರಕ್ಕೆ ಆಗಮಿಸಿ ಕೇಂದ್ರೀಯ ಬಸ್ ನಿಲ್ದಾಣದ ಆವರಣದಲ್ಲಿ ನಡೆದ ಶಕ್ತಿ ಯೋಜನೆ ಚಾಲನ ಕಾರ್ಯಕ್ರಮದಲ್ಲಿ ಭಾಗಿಯಾದರು. ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಚಿವರು,
ಬಸ್ ನಿಲ್ದಾಣದ ಆವರಣದಲ್ಲಿ ಶೃಂಗಾರಗೊಂಡು ನಿಂತಿದ್ದ ಕೊಪ್ಪಳ-ಹುಲಗಿ ಬಸ್ ಏರಿ ಸಂಚರಿಸಿ ಶಕ್ತಿ ಯೋಜನೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ಈ ವೇಳೆ ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಾಲತಿ ನಾಯಕ, ಉಮಾ ಪಾಟೀಲ, ಜ್ಯೋತಿ ಗೊಂಡಬಾಳ ಮೊದಲಾಗಿ ಕಿಶೋರಿ ಬೂದನೂರ, ಪದ್ಮಾವತಿ ಕಂಬಳಿ ಮತ್ತಿತರರು ಬಸ್ ಏರಿ ಸಂತಸ ವ್ಯಕ್ತಪಡಿಸಿದರು. ಶಾಸಕರು ಸೇರಿದಂತೆ ಕಾರ್ಯಕರ್ಯರು ಹಾಗೂ ಅಭಿಮಾನಿಗಳೊಂದಿಗೆ ಸಚಿವರೊಂದಿಗೆ ಬಸ್ ಏರಿ ಮಹಿಳಾ ಪ್ರಯಾಣಿಕರಿಗೆ ಉಚಿತವಾಗಿ ಟಿಕೆಟ್ ವಿತರಿಸಿ ಗವಿಮಠದವರೆಗೆ ಸಂಚರಿಸಿ ಗಮನ ಸೆಳೆದರು. ಬಳಿಕ ಮಹಿಳಾ ಕಾರ್ಯಕರ್ತರು ಹಾಗೂ ಪ್ರಯಾಣಿಕರು ಗವಿಮಠದ ಆವರಣದಲ್ಲಿ ಸಚಿವರೊಂದಿಗೆ ಗ್ರೂಪ್ ಫೋಟೋ ತೆಗೆಯಿಸಿಕೊಂಡು ಸಂಭ್ರಮಿಸಿದರು.
ಇದನ್ನೂ ಓದಿ:Free bus: ದಾವಣಗೆರೆಯಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್
ಇದಕ್ಕೂ ಮೊದಲು ಬಸ್ ನಿಲ್ದಾಣದ ಆವರಣದಲ್ಲಿ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ನಡೆದ ಶಕ್ತಿ ಯೋಜನೆ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ಮಹಿಳೆಯರ ಯೋಜನೆಯನ್ನು ಮೊಟ್ಟ ಮೊದಲಿಗೆ ಜಾರಿ ಮಾಡಿ ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಕಾರ್ಯ ಮಾಡಿದ್ದೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾನ್ಯ ಸಿದ್ಧರಾಮಯ್ಯನವರು ಶಕ್ತಿ ಯೋಜನೆಗೆ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದ ಸಮರ್ಥ ಮುಖ್ಯಮಂತ್ರಿಗಳಾಗಿದ್ದಾರೆ ಎಂದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಅನುಷ್ಠಾನದ ಬಗ್ಗೆ ಸಚಿವ ಸಂಪುಟದಲ್ಲಿ ಐದಾರು ತಾಸುಗಳಷ್ಟು ಚರ್ಚೆಯಾಗಿದೆ. ತಾಯಂದಿರ ಮೂಲಕವೇ ವಿನೂತನ ಯೋಜನೆಗಳಿಗೆ ಚಾಲನೆ ಕೊಡುತ್ತಿದ್ದೇವೆ. ಮೊದಲ ಯೋಜನೆಗೆ ಶಕ್ತಿ ಎಂದು ಹೆಸರಿಟ್ಟಿರುವುದು ಇನ್ನು ಅರ್ಥಪೂರ್ಣವಾಗಿದೆ. ಚುನಾವಣಾ ಪೂರ್ವದಲ್ಲಿ ಮಾತುಕೊಟ್ಟಂತೆ ನಾವು ನಡೆದುಕೊಂಡಿದ್ದೇವೆ. ಮಹಿಳೆಯರಿಗೆ ಶಕ್ತಿ ಕಾರ್ಡು ಕೊಡುವ ಪ್ರಕ್ರಿಯೆಯನ್ನು ಬೇಗನೇ ಪೂರ್ಣಗೊಳಿಸುತ್ತೇವೆ. ಜುಲೈ 1ರಿಂದ ಅನ್ನ ಭಾಗ್ಯ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.