ಗಂಗಾವತಿ: ಸದ್ಯಕ್ಕೆ ಮಾರುಕಟ್ಟೆಯಲ್ಲಿ ಪರ್ಯಾಯ ವಸ್ತು ಅಗ್ಗದ ದರದಲ್ಲಿ ಲಭ್ಯವಾಗುವವರೆಗೂ ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲದಲ್ಲಿ ವಸ್ತು, ತರಕಾರಿ, ಹೂವು - ಹಣ್ಣುಗಳನ್ನು ನೀಡಲು ಅವಕಾಶ ನೀಡಬೇಕು ಎಂದು ನಗರದಲ್ಲಿನ ವ್ಯಾಪಾರಿಗಳು ತಹಶೀಲ್ದಾರ್ ಯು. ನಾಗರಾಜ್ ಅವರಿಗೆ ಮನವಿ ಮಾಡಿದರು.
ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಸಾರ್ವಜನಿಕ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಹೇರಿದ್ದರಿಂದ ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ತಹಶೀಲ್ದಾರ್ ಕಚೇರಿಯಲ್ಲಿ ಸಂಬಂಧಿತ ಇಲಾಖೆಯ ಸಿಬ್ಬಂದಿ ಹಾಗೂ ವ್ಯಾಪಾರಿಗಳ ಸಭೆ ಕರೆಯಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ವ್ಯಾಪಾರಿಗಳು, ನಗರಸಭೆ ಕೈಗೊಳ್ಳುತ್ತಿರುವ ಕಾರ್ಯಾಚರಣೆಯಿಂದ ತಮಗೆ ತೊಂದರೆಯಾಗುತ್ತಿದೆ. ತಾತ್ಕಾಲಿಕ ಪರ್ಯಾಯದವರೆಗೂ ಅವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ನಗರಸಭೆಯ ನೈರ್ಮಲ್ಯ ವಿಭಾಗದ ಕಿರಿಯ ಆರೋಗ್ಯ ನಿರೀಕ್ಷಕ ಕೆ. ನಾಗರಾಜ್ ಆಕ್ಷೇಪ ವ್ಯಕ್ತಪಡಿಸಿ, ಅವಕಾಶ ಇಲ್ಲ ಎಂದರು.
ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಿದೆ. ಪರಿಸರದ ಮೇಲೆ ಪ್ಲಾಸ್ಟಿಕ್ ವ್ಯತಿರಿಕ್ತ ಪರಿಣಾಮ ಮಾಡುತ್ತಿರುವ ಕಾರಣಕ್ಕೆ ಸಾರ್ವಜನಿಕರ ಬಳಕೆ ನಿಷೇಧ ಮಾಡಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದು ಸೂಚನೆ ನೀಡಿದರು.
ಓದಿ: ಪದವಿ ವಿದ್ಯಾರ್ಥಿಗಳಿಗೆ ಹಣಕಾಸು ಶಿಕ್ಷಣ: ಎನ್ ಎಸ್ ಇ ಜೊತೆ ಶಿಕ್ಷಣ ಇಲಾಖೆ ಒಪ್ಪಂದ