ಕುಷ್ಟಗಿ (ಕೊಪ್ಪಳ): ಎನ್ಎಚ್ಎಂ ಯೋಜನೆ ಅಡಿಯಲ್ಲಿ ಗುತ್ತಿಗೆ-ಹೊರಗುತ್ತಿಗೆ ವೈದ್ಯಕೀಯ ಸಿಬ್ಬಂದಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದ ಬಿಸಿ ರೋಗಿಗಳಿಗೆ ತಟ್ಟಿದೆ.
ಕೋವಿಡ್ ವಿಷಮ ಪರಿಸ್ಥಿತಿಯಲ್ಲಿ ಸೆ. 24 ರಿಂದ ಆರಂಭಿಸಿದ ಮುಷ್ಕರ ಎರಡನೇ ದಿನಕ್ಕೆ ಕಾಲಿರಿಸಿದೆ. ಕುಷ್ಟಗಿ ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ತಾವರಗೇರಾ, ಹನುಮಸಾಗರ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿವಿಧ ಸೇವೆಯಲ್ಲಿರುವ 150ಕ್ಕೂ ಹೆಚ್ಚು ಸಿಬ್ಬಂದಿ ಕೆಲಸದಿಂದ ದೂರ ಉಳಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಕೊರೊನಾ ಗಂಟಲು ಮಾದರಿ ದ್ರವ ಪರೀಕ್ಷೆ, ರಕ್ತ ಪರೀಕ್ಷೆ, ಬಿ.ಪಿ. ಟೆಸ್ಟ್ ಸೇರಿದಂತೆ ಮೊದಲಾದವು ಎಂದಿನಂತೆ ನಡೆಯುತ್ತಿಲ್ಲ. ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುತ್ತಿದ್ದ ರೋಗಿಗಳು ಸಮರ್ಪಕವಾದ ಚಿಕಿತ್ಸೆ ಸಿಗದೇ ಚಡಪಡಿಸಿದರಲ್ಲದೇ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ.
ಗುತ್ತಿಗೆ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶಗೌಡ ಬೆದವಟ್ಟಿ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿ, ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲೂ ಕೆಲಸ ನಿರ್ವಹಿಸಿದ್ದರೂ ಸರ್ಕಾರಕ್ಕೆ ಕರುಣೆ ಬರಲಿಲ್ಲ. ಸರ್ಕಾರ ಸದರಿ ಸಿಬ್ಬಂದಿ ಬೇಡಿಕೆ ಮನ್ನಿಸಿಲ್ಲ. ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳು ಹಾಗೆಯೇ ಉಳಿದಿರುವ ಹಿನ್ನೆಲೆಯಲ್ಲಿ ಈ ಮುಷ್ಕರ ಅನಿವಾರ್ಯವಾಗಿದೆ ಎಂದಿದ್ದಾರೆ.
ಈ ದಿನವೇ ಬೇಡಿಕೆಯನ್ನು ಈಡೇರಿಸಿದರೆ, ನಾಳೆಯೇ ಕೆಲಸಕ್ಕೆ ಹಾಜರಾಗಲಿದ್ದೇವೆ. ಶುಕ್ರವಾರ ಆರೋಗ್ಯ ಸಚಿವ ಬಿ.ಶ್ರೀರಾಮುಲು ಈ ಸಂಬಂಧ ಬೆಂಗಳೂರಲ್ಲಿ ಸಭೆ ಕರೆದಿದ್ದಾರೆ. ಸಭೆಯ ಪರಿಣಾಮ ನಂತರ ಗೊತ್ತಾಗಲಿದೆ ಎಂದರು.