ಕೊಪ್ಪಳ: ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಹಾಗೂ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಮನ್ವಂತರ ಕಾರ್ಯಕ್ರಮದಲ್ಲಿ ಆರು ಜನರ ಪುಸ್ತಕ ವಿಮರ್ಶೆಗಳು ಬಹುಮಾನಕ್ಕೆ ಆಯ್ಕೆಯಾಗಿವೆ.
ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಡಳಿತ, ವಿದ್ಯಾರ್ಥಿ ಮತ್ತು ವಯಸ್ಕರ ವಿಭಾಗದಲ್ಲಿ ಜಿಲ್ಲಾಡಳಿತ ನೀಡಿದ್ದ ಪುಸ್ತಕಗಳನ್ನು ಓದಿ ವಿಮರ್ಶೆ ಬರೆಯಲು ತಿಳಿಸಲಾಗಿತ್ತು. ಅದರಂತೆ ಸಾಕಷ್ಟು ಜನರು ವಿಮರ್ಶೆಗಳನ್ನು ಬರೆದಿದ್ದರು. ಎಲ್ಲಾ ವಿಮರ್ಶೆಗಳಲ್ಲಿ ಆಯ್ದ ಉತ್ತಮ 20 ವಿಮರ್ಶೆಗಳನ್ನು ಜಿಲ್ಲಾ ಮಟ್ಟದಲ್ಲಿ ಸಂದರ್ಶನ ನಡೆಸಿ ಎರಡೂ ವಿಭಾಗದಲ್ಲಿ ತಲಾ ಮೂರರಂತೆ ಒಟ್ಟು 6 ವಿಮರ್ಶೆಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.
ಬಹುಮಾನಕ್ಕೆ ಆಯ್ಕೆಯಾದರಿಗೆ ಸೆ.17 ರಂದು ನಡೆಯುವ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದೆ.
ವಿದ್ಯಾರ್ಥಿ ವಿಭಾಗದಲ್ಲಿ ಮೆಲುಹ ಪುಸ್ತಕ ಓದಿ ವಿಮರ್ಶೆ ಬರೆದ ಸಾಕ್ಷಿ ಪಾಟೀಲ್ ಪ್ರಥಮ, ಚೋಮನದುಡಿ ಪುಸ್ತಕ ಓದಿ ವಿಮರ್ಶೆ ಬರೆದ ಬಸವರಾಜ ಅರಕೇರಿ ದ್ವಿತೀಯ ಹಾಗೂ ಮಹಾಶ್ವೇತ ಪುಸ್ತಕ ವಿಮರ್ಶೆ ಬರೆದ ಶಾಂತಾ ದೇವಪ್ಪ ಮಡಿವಾಳರ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಇನ್ನು ವಯಸ್ಕರ ವಿಭಾಗದಲ್ಲಿ ವಂಶವೃಕ್ಷ ಪುಸ್ತಕ ಓದಿ ವಿಮರ್ಶೆ ಬರೆದ ಸ್ಮಿತಾ .ಎಸ್ ಅಂಗಡಿ ಪ್ರಥಮ, ಬೆಟ್ಟದಜೀವ ಪುಸ್ತಕ ಓದಿ ವಿಮರ್ಶೆ ಬರೆದ ಸುರೇಶ ಪಿ. ಪೂಜಾರ ದ್ವಿತೀಯ ಹಾಗೂ ಶೂ ಡಾಗ್ ಪುಸ್ತಕ ಓದಿ ವಿಮರ್ಶೆ ಬರೆದ ವೀರೇಶ ಮೇಟಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.