ಗಂಗಾವತಿ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನಿಗದಿತ ಪ್ರಮಾಣಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ನೀರು ಹರಿಸಿದ ಪರಿಣಾಣ ಆನೆಗೊಂದಿ ಹೋಬಳಿಯ ಮಲ್ಲಾಪುರ ಗ್ರಾಮ ಮುಳುಗುವ ಹಂತಕ್ಕೆ ತಲುಪಿದೆ. ಇದರಿಂದ ಗ್ರಾಮಸ್ಥರಿಗೆ ಆತಂಕ ಎದುರಾಗಿದೆ.
ಇಲ್ಲಿನ ಎಡದಂಡೆಯ ಪಾಪಯ್ಯ ಸುರಂಗದ (ಟನಲ್) ಸಮೀಪದಲ್ಲಿರುವ 11/ಎ ಉಪ ಕಾಲುವೆ ಮೂಲಕ ಹೆಚ್ಚುವರಿ ನೀರು ಗ್ರಾಮದೊಳಗೆ ಹರಿದು ಬರುತ್ತಿದೆ. ಎಡದಂಡೆಯ ರಕ್ಷಣಾ ಗೋಡೆಯ ಮೇಲ್ಭಾಗದಲ್ಲೂ ನೀರು ಹರಿಯುತ್ತಿದೆ. ಈಗಾಗಲೇ ಗ್ರಾಮದ ಹೊಲ ಗದ್ದೆಗಳು ಸಂಪೂರ್ಣ ನೀರುಪಾಲಾಗಿವೆ.
ಸಹಜವಾಗಿ ನಾಲೆಗೆ 21 ಅಡಿಯಷ್ಟು ನೀರು ಬಿಡಲಾಗುತ್ತದೆ. ಆದರೀಗ 25 ಅಡಿ ನೀರು ಹರಿಸುತ್ತಿರುವ ಪರಿಣಾಮ ಸಮಸ್ಯೆಗೆ ಕಾರಣವಾಗಿದೆ. ಈ ಕೂಡಲೇ ಸರ್ಕಾರ ಏನಾದರೂ ವ್ಯವಸ್ಥೆ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.