ಗಂಗಾವತಿ (ಕೊಪ್ಪಳ) : ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಮೂರು ಜೋಡಿಗಳನ್ನು ಪರಸ್ಪರ ಆಪ್ತ ಸಮಾಲೋಚನೆ ನಡೆಸುವ ಮೂಲಕ ನ್ಯಾಯಾಧೀಶರು ಒಂದುಗೂಡಿಸಿದ್ದಾರೆ.
ಶನಿವಾರ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ದಲ್ಲಿ ವಿವಿಧ ಪ್ರಕರಣಗಳನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು, ಜೀವನಾಂಶ ಕೋರಿ ಬಂದಿದ್ದ ಅರ್ಜಿ, ರಸ್ತೆ ಅಪಘಾತ, ಚೆಕ್ ಬೌನ್ಸ್, ವಿಚ್ಛೇದನದಂತ ಪ್ರಕರಣಗಳನ್ನು ರಾಜಿ ಸಂಧಾನ ಮಾಡುವ ಮೂಲಕ ಇತ್ಯರ್ಥ ಮಾಡಿದರು.
ವಿವಿಧ ಕಾರಣಕ್ಕೆ ವಿಚ್ಛೇದನ ಕೋರಿ ಕಾರಟಗಿ ತಾಲೂಕಿನ ನವಲಿಯ ತಿರುಪತೆಪ್ಪ-ಲಕ್ಷ್ಮಿ ಅಲಿಯಾಸ ಬಸಮ್ಮ ನವಲಿ, ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳದ ಭೀಮೇಶ-ಮಂಜುಳಾ ಹಾಗೂ ಗಂಗಾವತಿ ತಾಲೂಕಿನ ವಿಠಲಾಪುರದ ರಾಮಪ್ಪ-ಸೌಭಾಗ್ಯ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ತಿರುಪತೆಪ್ಪ-ಲಕ್ಷ್ಮಿಗೆ 2020 ರಲ್ಲಿ, ಭೀಮೇಶ-ಮಂಜುಳಾ ಅವರಿಗೆ 2021ರಲ್ಲಿ ಹಾಗೂ ರಾಮಪ್ಪ-ಸೌಭಾಗ್ಯ ಎಂಬುವರಿಗೆ 2020ರಲ್ಲಿ ವಿವಾಹ ಆಗಿತ್ತು. ಆದರೆ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇಲ್ಲದ್ದರಿಂದ ಮೂರು ಜೋಡಿಗಳು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.
ಇದೇ ವೇಳೆ ಸಂಸಾರಿಕ ಜೀವನದಿಂದ ದೂರವಿದ್ದ ಒಂದೇ ಕುಟುಂಬದ ಮೂವರು ಮಹಿಳೆಯರು ಜೀವನಾಂಶ ಕೋರಿ ಪ್ರತ್ಯೇಕವಾಗಿ ಅರ್ಜಿ ದಾಖಲಿಸಿದ್ದರು. ಮೂರು ಪ್ರಕರಣಗಳನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು, ರಾಜಿ ಸಂಧಾನ ಮಾಡುವ ಮೂಲಕ ವಿಚ್ಛೇದನ ಹಾದಿಯಲ್ಲಿದ್ದ ಜೋಡಿಗಳನ್ನು ಒಂದುಗೂಡಿಸಿದರು.
ಕಾರಟಗಿ ತಾಲೂಕಿನ ಸಿದ್ದಾಪುರ ಆಶಾ-ಚಂದ್ರಗೌಡ ಪಾಟೀಲ್, ಅಶ್ವಿನಿ-ಗಣೇಶಗೌಡ ಪಾಟೀಲ್ ಹಾಗೂ ಪ್ರಿಯಾಂಕ-ಮಂಜುನಾಥ ಗೌಡ ಪಾಟೀಲ್ ಸಿದ್ದಾಪುರ ಎಂಬ ಜೋಡಿಗಳ ಬಾಳಲ್ಲಿ ಮರು ಹೊಂದಾಣಿಕೆಯನ್ನು ಲೋಕ ಅದಾಲತ್ದಲ್ಲಿ ನ್ಯಾಯಾಧೀಶರು ಕೈಗೊಂಡರು.
ಈ ಬಗ್ಗೆ ಪರಿಶೀಲನೆ ನಡೆಸಿದ್ದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್, ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ರಮೇಶ್ ಗಾಣಿಗೇರ, ಪ್ರಧಾನ ಸಿವಿಲ್ ಜೆಎಂಎಫ್ಸಿ ನ್ಯಾಯಾಧೀಶೆ ಶ್ರೀದೇವಿ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಗೌರಮ್ಮ ಪಾಟೀಲ್ ಅವರು ದಂಪತಿಗಳ ಜೊತೆ ಆಪ್ತ ಸಮಾಲೋಚನೆ ನಡೆಸಿ ಒಂದುಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಪಘಾತ ಪ್ರಕರಣಗಳಲ್ಲಿ ವಿಮೆಗೆ ಆದೇಶ: 2019 ರಂದು ಕನಕಗಿರಿ-ಗಂಗಾವತಿ ರಸ್ತೆ ಮಧ್ಯೆ ಕೇಸರಹಟ್ಟಿಯಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಕೆಇಬಿ ನೌಕರ ಬಸವರಾಜ ಬಳಿಗೇರ ಕುಟುಂಬಕ್ಕೆ 84 ಲಕ್ಷ ರೂಪಾಯಿ ಮೊತ್ತದ ವಿಮೆಯನ್ನು ನ್ಯಾಯಾಧೀಶರು ಕೊಡಿಸಿದರು.
ಮೃತ ವ್ಯಕ್ತಿಯೂ ಮಾಡಿಸಿದ್ದ ವಿಮೆಗೆ 1.84 ಕೋಟಿ ಮೊತ್ತದ ಪರಿಹಾರ ನೀಡುವಂತೆ ಮೃತನ ಪತ್ನಿ ಬಿ. ರೇಣುಕಾ ಎಂಬುವರು ಅರ್ಜಿ ಸಲ್ಲಿಸಿದ್ದರು. ಇಫ್ಕೋ ಟೋಕಿಯೋ ಕಂಪನಿ ಜನರಲ್ ಇನ್ಷುರೆನ್ಸ್ ಕಂಪನಿಯು 84 ಲಕ್ಷ ಮೊತ್ತದ ವಿಮಾ ನೀಡುವಂತೆ ನ್ಯಾಯಾಧೀಶರು ನಿರ್ದೇಶನ ನೀಡಿ ಪ್ರಕರಣ ಅಂತ್ಯಗೊಳಿಸಿದರು.
ಇದನ್ನೂಓದಿ:ಸ್ವಾಮೀಜಿಗಳು ರಾಜಕೀಯದಿಂದ ಹೊರತಾಗಿರಬೇಕು: ನಿಜಗುಣಾನಂದ ಸ್ವಾಮೀಜಿ