ಕೊಪ್ಪಳ: ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿ ಮಾಡಲಾಗಿರುವ ಲಾಕ್ಡೌನ್ ಸಾಮಾನ್ಯ ಜನರ ಬದುಕನ್ನು ಸಂಕಷ್ಟಕ್ಕೆ ನೂಕಿದೆ. ಸಣ್ಣ ಪುಟ್ಟ ವ್ಯಾಪಾರ, ದುಡಿಮೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅತ್ತ ದುಡಿಮೆಯೂ ಇಲ್ಲದೆ, ಇತ್ತ ಪಡಿತರ ಚೀಟಿಯೂ ಇಲ್ಲದೆ ಇಲ್ಲೊಂದು ಸಮುದಾಯದ ಹತ್ತಾರು ಕುಟುಂಬಗಳು ತೊಂದರೆಗೆ ಸಿಲುಕಿವೆ.
ಜಿಲ್ಲಾ ಕೇಂದ್ರ ಕೊಪ್ಪಳದ ಗಾಂಧಿನಗರದಲ್ಲಿರುವ ಬಹುತೇಕ ನಿವಾಸಿಗಳು ಕೊರಚ ಸಮುದಾಯದವರು. ಈ ಕುಟುಂಬಗಳು ಪೊರಕೆ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿವೆ. ಹಳೆಯ ಪ್ಲಾಸ್ಟಿಕ್ ವಸ್ತುಗಳನ್ನು ಬೇರೊಬ್ಬರಿಂದ ಪಡೆದು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಮಾರಾಟ ಮಾಡಿ ಬಂದ ಅಲ್ಪ ಸ್ವಲ್ಪ ಆದಾಯದಿಂದ ಜೀವನ ನಡೆಸುತ್ತಾರೆ. ಹೀಗೆ ಬದುಕುವ ಇಲ್ಲಿನ 40ಕ್ಕೂ ಅಧಿಕ ಕುಟುಂಬಗಳಿಗೆ ಪಡಿತರ ಚೀಟಿ ಇಲ್ಲ. ಕೆಲವರ ಪಡಿತರ ಚೀಟಿಗಳು ವಿವಿಧ ಕಾರಣಕ್ಕೆ ರದ್ದುಗೊಂಡಿವೆ.
ಲಾಕ್ಡೌನ್ ಆಗಿರುವುದರಿಂದ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡಲು ಹೋಗುವುದಿಲ್ಲ. ಇದರಿಂದಾಗಿ ದುಡಿಮೆ ಇಲ್ಲದೆ ತೊಂದರೆಯಾಗಿದೆ. ಇತ್ತ ಪಡಿತರ ಚೀಟಿಯೂ ಇಲ್ಲ. ಹೀಗಾಗಿ ಹೇಗೆ ಬದುಕು ನಡೆಸಬೇಕು ಎಂದು ಚಿಂತೆಯಾಗಿದೆ ಎನ್ನುತ್ತಾರೆ ಗಾಂಧಿನಗರದ ಕೊರಚ ಸಮುದಾಯದ ಮಹಿಳೆ ರಾಮವ್ವ.
ಕಳೆದ ಬಾರಿ ಲಾಕ್ಡೌನ್ ಸಂದರ್ಭದಲ್ಲಿ ಒಂದಿಷ್ಟು ಸಹಾಯ ಮಾಡಿದ್ದರು. ಈ ಬಾರಿ ಏನೂ ಸಹಾಯ ಮಾಡಿಲ್ಲ. ಅಲ್ಲದೆ ಕಡು ಬಡವರಾಗಿರುವ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳಿಗೆ ಪಡಿತರ ಚೀಟಿಯಿಲ್ಲ. ಇದರಲ್ಲಿ ಕೆಲವರ ಪಡಿತರ ಚೀಟಿ ವಿವಿಧ ಕಾರಣಕ್ಕೆ ರದ್ದಾಗಿವೆ. ಸಂಬಂಧಿಸಿದವರು ಇವರಿಗೆ ಪಡಿತರ ಚೀಟಿ ಮಾಡಿಕೊಡಲು ಮುಂದಾಗಬೇಕು ಎಂದು ಸ್ಥಳೀಯ ನಿವಾಸಿ ಗಾಳೆಪ್ಪ ಮುಂಗೋಲಿ ಆಗ್ರಹಿಸಿದ್ದಾರೆ.