ಕೊಪ್ಪಳ: ರಾಜ್ಯ ಸರ್ಕಾರ ಕೊಪ್ಪಳ ಏತ ನೀರಾವರಿಗೆ 3.50 ಸಾವಿರ ಕೋಟಿ ರೂಪಾಯಿ ನೀಡಿದೆ. ಇದರಿಂದ 3.2 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಯಲಿದೆ. ಈ ಭಾಗದ ಭೂಮಿಗೆ ನೀರು ಹರಿದು ರೈತರು ಬಂಗಾರ ಬೆಳೆಯುವಂತಾಗಲಿ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಇಂದು ಕೃಷ್ಣಭಾಗ್ಯ ಜಲ ನಿಗಮದಿಂದ ಕೊಪ್ಪಳ ಏತ ನೀರಾವರಿ ಯೋಜನೆಯಡಿಯಲ್ಲಿ ಕೆರೆ ತುಂಬಿಸುವ ಯೋಜನೆಯ ಲೋಕಾರ್ಪಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸಚಿವ ಹಾಲಪ್ಪ ಆಚಾರ್ ಆಶಯದಂತೆ ಯಲಬುರ್ಗಾ ರೈತರು ಶ್ರೀಮಂತರಾಗಬೇಕು. ಭಾರತ ಈಗ ಅರ್ಥಿಕತೆಯಲ್ಲಿ ಜಗತ್ತಿನಲ್ಲಿ ಐದನೇ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದಿಂದ ಭಾರತ ಇಂದು ಶ್ರೀಮಂತವಾಗುತ್ತಿದೆ. ಬಂಡವಾಳ ಹೂಡಿಕೆ ಸೇರಿದಂತೆ ವಿದೇಶಿಗರು ಭಾರತದತ್ತ ಬರುತ್ತಿದ್ದಾರೆ. ನಮ್ಮ ದೇಶವು ಬರುವ ದಿನಗಳಲ್ಲಿ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಿಚಾರ ಕುರಿತು ಮಾತನಾಡಿ, ಅಭ್ಯರ್ಥಿಗಳ ಘೋಷಣೆ ಮಾಡುವುದು ನಮ್ಮ ರಾಷ್ಟ್ರೀಯ ಮುಖಂಡರು, ಪಾರ್ಲಿಮೆಂಟರಿ ಬೋರ್ಡ್ನಲ್ಲಿ ಈ ಬಗ್ಗೆ ತೀರ್ಮಾನಿಸಲಿದ್ದಾರೆ. ನಮ್ಮ ನಾಯಕರು ಸರಳ ಸಜ್ಜನಿಕೆ ಅಭ್ಯರ್ಥಿಗಳು ಹಾಗೂ ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷದ ಕೆಲಸ ಮಾಡಿದವರಿಗೆ ಟಿಕೆಟ್ ನೀಡಲಿದ್ದಾರೆ. ಹಲವಾರು ಮಾನದಂಡದ ಆಧಾರದಲ್ಲಿ ಟಿಕೆಟ್ ನೀಡುತ್ತಾರೆ ಎಂದರು.
ಕೊಟ್ಟ ಮಾತಿನಂತೆ ನಡೆದಿದ್ದೇನೆ: ನೀರಾವರಿ ವಿಷಯಕ್ಕೆ ಸಂಬಂಧಿಸಿದಂತೆ ನಾನು ಕೊಟ್ಟ ಮಾತಿನಂತೆ ಕೆಲಸ ಮಾಡಿದೆ. ನಮ್ಮ ಸರ್ಕಾರ ಸಹ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಎಂದು ಸಚಿವ ಹಾಲಪ್ಪ ಆಚಾರ ಹೇಳಿದರು. ಸಿಎಂ ಅವರು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆ ಕೊನೆ ಕ್ಷಣದಲ್ಲಿ ಅವರು ಬರಲು ಆಗಿಲ್ಲ. ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನಮ್ಮ ಸರ್ಕಾರ ಮಾಡಿದೆ ಎಂದರು.
ಚುನಾವಣೆ ಭಾಷಣ ಮಾಡಿದ ಸಂಗಣ್ಣ: ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ಸಂಗಣ್ಣ ಕರಡಿ ಅವರು ಸರ್ಕಾರದ ಕಾರ್ಯಕ್ರಮದಲ್ಲಿ ಚುನಾವಣಾ ಭಾಷಣ ಮಾಡಿದರು. ಡಬಲ್ ಇಂಜಿನ್ ಸರ್ಕಾರಕ್ಕೆ ಹಾಗೂ ಸಚಿವ ಹಾಲಪ್ಪ ಆಚಾರ್‌ಗೆ ಆಶೀರ್ವಾದ ಮಾಡಿ ಎಂದು ಹೇಳುವ ಮೂಲಕ ಸರ್ಕಾರದ ಕಾರ್ಯಕ್ರಮದಲ್ಲಿ ಮತಯಾಚಿಸಿದರು.
ಸಿಎ ಬಸವರಾಜ ಬೊಮ್ಮಾಯಿ ಗೈರು: ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಮಿಸುವ ಹಿನ್ನೆಲೆಯಲ್ಲಿ ಜನರನ್ನು ಕರೆತರಲು ಬಸ್‌ಗಳನ್ನು ಸಹ ಬಿಡಲಾಗಿತ್ತು. ಇಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ 11.30 ಕ್ಕೆ ಚುನಾವಣಾ ಆಯೋಗದಿಂದ ಇದ್ದ ಕಾರಣ ಸಿಎಂ ಬರೋದು ರದ್ದಾಯಿತು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗುತ್ತದೆ ಎಂದು ಮೊದಲು ಹೇಳಲಾಯಿತಾದರೂ ನಂತರ ತರಾತುರಿಯಲ್ಲಿ ಕಾರ್ಯಕ್ರಮವನ್ನು ಮಾಡಿ ಮುಗಿಸಲಾಯಿತು.
ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುತ್ತಿದ್ದಂತೆ ಸಚಿವರಾದ ಗೋವಿಂದ ಕಾರಜೋಳ, ಹಾಲಪ್ಪ ಆಚಾರ್ ಹಾಗೂ ಸಂಗಣ್ಣ ಕರಡಿ ಅವರು ಸರ್ಕಾರಿ ಕಾರುಗಳನ್ನು ಬಿಟ್ಟು ಖಾಸಗಿ ವಾಹನಗಳಲ್ಲಿ ತೆರಳಿದರು. ಅಲ್ಲದೆ, ಅಲ್ಲಿದ್ದ ಅಧಿಕಾರಿಗಳು ರಾಜಕೀಯ ನಾಯಕರ, ಪಕ್ಷದ ಬ್ಯಾನರ್‌ಗಳನ್ನು ತೆರವುಗೊಳಿಸಿದರು. ಅರ್ಧ ಗಂಟೆಯಲ್ಲೇ ಆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಇದನ್ನೂ ಓದಿ: ಶೀಘ್ರದಲ್ಲೇ ಬೆಂಗಳೂರು-ಮುಂಬೈ, ಬೆಂಗಳೂರು-ಹೈದರಾಬಾದ್ ನಡುವೆ ವಂದೇ ಭಾರತ್ ರೈಲು: ಸಚಿವ ಸೋಮಣ್ಣ