ಗಂಗಾವತಿ (ಕೊಪ್ಪಳ): ಈ ಹಿಂದೆ ಆನೆಗೊಂದಿ ಮತ್ತು ಅಂಜನಾದ್ರಿ ದೇಗುಲದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಚಿರತೆ ಇದೀಗ ಗಂಗಾವತಿಯಲ್ಲಿಯೂ ಕಂಡು ಬರುತ್ತಿದೆ. ಇಲ್ಲಿನ ಸಿದ್ಧಿಕೇರಿಯ ಬೆಟ್ಟದಲ್ಲಿ ಒಂದು ಚಿರತೆ ಹಾಗೂ ನಾಲ್ಕು ಮರಿಗಳು ಓಡಾಡುತ್ತಿರುವುದನ್ನು ರೈತರು ನೋಡಿದ್ದಾರೆ.
ರೈತ ರಂಗಪ್ಪ ನಾಯಕ್ ಎಂಬುವವರ ಹೊಲದ ಸಮೀಪದಲ್ಲಿದ್ದ ಜಾನಿ ಹೋಟೆಲ್ (ಜಾನಮ್ಮನ ಗುಡ್ಡ) ಬೆಟ್ಟದ ತುದಿಯಲ್ಲಿನ ದೊಡ್ಡ ಬಂಡೆಯ ಮೇಲೆ ಚಿರತೆಯೊಂದು ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಇದಕ್ಕೂ ಮೊದಲು ಇದೇ ಪ್ರದೇಶದಲ್ಲಿ ಮೇಯಲು ಬೀಡು ಬಿಟ್ಟಿದ್ದ ಬೆಳಗಾವಿ ಜಿಲ್ಲೆಯ ಅಜ್ಜಪ್ಪ ಎಂಬುವವರ ಕುರಿ ಹಿಂಡಿನ ಮೇಲೆ ದಾಳಿ ಮಾಡಿದ ಚಿರತೆ ಒಂದು ಟಗರನ್ನು ಕೊಂದು ಹಾಕಿದೆ.
'ಇದೀಗ ಚಿರತೆ ಹಾವಳಿ ಹೆಚ್ಚಾಗಿದ್ದು, ಜನ ವಸತಿ ಪ್ರದೇಶಕ್ಕೂ ನುಗ್ಗುತ್ತಿವೆ. ಕೂಡಲೇ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು' ಎಂದು ಸಿದ್ಧಿಕೇರಿ ನಿವಾಸಿ ರಾಜೇಶ ಪಾಳೆಗಾರ ಒತ್ತಾಯಿಸಿದ್ದಾರೆ.