ಕುಷ್ಟಗಿ: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ವಿಳಂಬವಾದರೂ, ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಮೆಕ್ಕೆಜೋಳ, ಸಜ್ಜೆ ಬೆಳೆ ಬೆಳೆಯಲು ಯುರಿಯಾ ರಸಗೊಬ್ಬರಕ್ಕೆ ಭರ್ಜರಿ ಬೇಡಿಕೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ರೈತರು ಖಾಸಗಿ ಮಾರಾಟಗಾರರ ಅಂಗಡಿಯ ಮುಂದೆ ಸರದಿಯಲ್ಲಿ ತಾಸುಗಟ್ಟಲೇ ನಿಂತು ಯುರಿಯಾ ಗೊಬ್ಬರ ಖರೀದಿಗೆ ಮುಂದಾಗಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಸದ್ಯ ಉತ್ತಮ ಮಳೆಯಾಗಿದೆ. ರೈತರು ಮೆಕ್ಕೆಜೋಳ, ಸಜ್ಜೆ ಬಿತ್ತನೆಗೆ ಒಲವು ತೋರಿಸಿದ್ದಾರೆ. ಈಗಾಗಲೇ ಈ ಬೆಳೆಗಳಿಗೆ ಮೇಲುಗೊಬ್ಬರವಾಗಿ ಬಳಸಲು ಯುರಿಯಾ ರಸಗೊಬ್ಬರ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿದೆ.
ತಾಲೂಕಿನಲ್ಲಿ ಹೋಬಳಿ ಸೇರಿದಂತೆ 60 ಖಾಸಗಿ ಡೀಲರ್ಗಳಿದ್ದು, ಇವುಗಳಲ್ಲಿ ಪ್ರಮುಖವಾಗಿ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ. ಬುಧವಾರ ಎಲ್ಲ ಡೀಲರ್ ಮಳಿಗೆಯಲ್ಲಿ ದಾಸ್ತಾನು ಖಾಲಿಯಾಗಿದ್ದು, ಪಟ್ಟಣದ ಕಾಳಗಿ ಡೀಲರ್ಸ್ ಬಳಿ ದಾಸ್ತಾನು ಇರುವುದರಿಂದ ರೈತರು ಗೊಬ್ಬರ ಖರೀದಿಸಲು ಮುಗಿ ಬಿದ್ದಿದ್ದಾರೆ.
ಪ್ರತಿ ಡೀಲರ್, ಸಹಕಾರ ಸಂಘಗಳಲ್ಲಿ ಪ್ರತಿ ದಿನದ ಮಾರಾಟ ಹಾಗೂ ದಾಸ್ತಾನು ವಿವರ ಪಾರದರ್ಶಕವಾಗಿ ಪರಿಶೀಲಿಸಲಾಗುತ್ತಿದ್ದು, ಕುಷ್ಟಗಿ ತಾಲೂಕಿನಲ್ಲಿ ಯುರಿಯಾ ರಸಗೊಬ್ಬರ ಕೊರತೆಯಾಗದಂತೆ ನಿಗಾ ವಹಿಸಲಾಗಿದೆ. ಈಗಾಗಲೇ ಬೇಡಿಕೆಗೆ ಅನುಗುಣವಾಗಿ, 200 ಮೆಟ್ರಿಕ್ ಟನ್ ರಸಗೊಬ್ಬರದಲ್ಲಿ ಈಗಾಗಲೇ 181 ಟನ್ ಮಾರಾಟವಾಗಿದೆ.
ಸದ್ಯ ಮೆಣೆದಾಳ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 20 ಟನ್, ಹನುಮಸಾಗರದಲ್ಲಿ 40 ಟನ್ ಸೇರಿದಂತೆ ಒಟ್ಟು 60 ಮೆಟ್ರಕ್ ಟನ್ ದಾಸ್ತಾನು ಇದೆ. ಸದ್ಯ ಯುರಿಯಾ ರಸಗೊಬ್ಬರದ ಕೊರತೆ ಇಲ್ಲ. ಇನ್ನು ಉತ್ತಮ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ 400 ಮೆಟ್ರಿಕ್ ಟನ್ ಬೇಡಿಕೆ ಪ್ರಸ್ತಾವನೆಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿರುವುದಾಗಿ ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ್ ಮಾಹಿತಿ ನೀಡಿದರು.