ಗಂಗಾವತಿ: ವಿಶ್ವವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಕೊರೊನಾ ವೈರಸ್ ಬಗ್ಗೆ, ಅದು ಉಂಟು ಮಾಡುತ್ತಿರುವ ತಲ್ಲಣ, ವ್ಯಾಪಿಸುತ್ತಿರುವ ಜಗದ ವಿಸ್ತಾರ, ಅದರ ಬಗೆಗಿನ ಭೀತಿ ಹೀಗೆ ಹತ್ತಾರು ವಿಷಯಗಳ ಮೇಲೆ ಗ್ರಂಥಪಾಲಕ ರಮೇಶ ಗಬ್ಬೂರು ಎಂಬವರು ಗೀತೆ ರಚಿಸಿ ಸ್ವತಃ ರಾಗ, ಸಂಗೀತ ಸಂಯೋಜನೆ ಮಾಡಿದ್ದಾರೆ. ಇದೀಗ ಇವರ ಗೀತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇಲ್ಲಿನ ಬಾಲಕರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ರಮೇಶ ಗಬ್ಬೂರು, ದಲಿತ ಸಂವೇದನೆಯ ವಿಶಿಷ್ಟ ಸಾಹಿತಿ. ವಿಭಿನ್ನ ಗಾಯಕ, ಕವಿ, ರಾಗ-ಸಂಗೀತ ಸಂಯೋಜಕ. ಗೀತೆಗಳಿಗೆ ಭಾವಾರ್ಥ ಕಲ್ಪಿಸುವ ಮೂಲಕ ಜನಮನ ಸೆಳೆದಿದ್ದಾರೆ.
ಕ್ರಾಂತಿ ಗೀತೆ, ಸಾಮಾಜಿಕ ಕಳಕಳಿ, ಸಮಾನತೆಯಂತಹ ವಿಷಯಗಳ ನೂರಾರು ಗೀತೆಗಳಿಗೆ ಗಬ್ಬೂರು ಧ್ವನಿಯಾಗಿದ್ದಾರೆ.