ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿರೋದು ಜನರಲ್ಲಿ ಭೀತಿ ಹೆಚ್ಚಿಸಿದೆ. ಇದಕ್ಕೆ ಮುಖ್ಯ ಕಾರಣ ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ದೊರೆಯದೆ ಸಾವಿನ ಸಂಖ್ಯೆ ಏರುತ್ತಿದೆ ಎಂಬ ಆರೋಪ ಬಲವಾಗಿದೆ. ಅಲ್ಲದೆ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದೆ ಇರೋದೂ ಸಹ ಕಾರಣವಾಗುತ್ತಿದೆ ಎಂಬ ಮಾತು ಸಹ ಗುಟ್ಟಾಗಿ ಉಳಿದಿಲ್ಲ.
ಕೊರೊನಾ ಸೋಂಕು ಜಿಲ್ಲೆಯಲ್ಲಿ ದಿನೇ ದಿನೇ ಏರುಗತಿಯಲ್ಲಿ ಸಾಗಿದೆ. ಆಗಸ್ಟ್ 28ರ ಸಂಜೆಯ ವೇಳೆಗೆ ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 6 ಸಾವಿರ ಗಡಿ ದಾಟಿದೆ. ಜಿಲ್ಲೆಯಲ್ಲಿ ಗಂಗಾವತಿ ತಾಲೂಕಿನಲ್ಲಿ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಕೊಪ್ಪಳ ತಾಲೂಕು ಎರಡನೇ ಸ್ಥಾನದಲ್ಲಿ, ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.
ಆಗಸ್ಟ್ 28ರ ಸಂಜೆಯವರೆಗೆ ಒಟ್ಟು 139 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಆಗಸ್ಟ್ ತಿಂಗಳಲ್ಲಿ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ದಿನವೂ ಏನಿಲ್ಲವೆಂದರೂ ಕನಿಷ್ಠ ಮೂರಕ್ಕೂ ಹೆಚ್ಚು ಜನರ ಸಾವಾಗುತ್ತಿದೆ. ಇದೇ ತಿಂಗಳಲ್ಲಿ ಒಂದೇ ದಿನ 13 ಜನರು ಸಾವಿಗೀಡಾಗಿದ ಉದಾಹರಣೆ ಇದೆ.
ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ಸಿಗದೆ ಇರೋದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂಬ ಮಾತುಗಳು ಬಲವಾಗಿವೆ. ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಕೊರತೆ, ವೈದ್ಯರ ಕೊರತೆಯಿಂದ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಇದರ ಜೊತೆಗೆ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಕಿಮ್ಸ್ ನಿರ್ದೇಶಕರ ನಡುವೆ ಸಮನ್ವಯತೆ ಇಲ್ಲ. ಇದು ಸಹ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ಸಿಗದೆ ಅವ್ಯವಸ್ಥೆಗೆ ಕಾರಣ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಈ ಅಧಿಕಾರಿಗಳಲ್ಲಿ ಸಮನ್ವಯತೆ ಇಲ್ಲ. ಹೀಗಾಗಿ ಇವರನ್ನು ಬದಲಾಯಿಸಿ ವ್ಯವಸ್ಥೆ ಸರಿಪಡಿಸಬೇಕು ಎಂದು ಸ್ವತಃ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದ್ದಾರೆ.
ಇನ್ನು ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 67 ವೆಂಟಿಲೇಟರ್ಗಳು ಲಭ್ಯವಿದ್ದು, ಅದರಲ್ಲಿ ಕೇವಲ 33 ವೆಂಟಿಲೇಟರ್ಗಳು ಮಾತ್ರ ಬಳಕೆಗೆ ಲಭ್ಯವಿವೆ. 28 ವೆಂಟಿಲೇಟರ್ಗಳನ್ನು ಇನ್ಸ್ಟಾಲೇಶನ್ ಮಾಡಬೇಕಿದೆ ಹಾಗೂ 6 ವೆಂಟಿಲೇಟರ್ಗಳು ದುರಸ್ತಿಯಲ್ಲಿವೆ. ಬಳಕೆಗೆ ಲಭ್ಯವಿರುವ ಈ 33 ವೆಂಟಿಲೇಟರ್ಗಳ ಪೈಕಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ವಿಭಾಗದಲ್ಲಿ 16, ಕುಷ್ಟಗಿಯಲ್ಲಿ 2, ಗಂಗಾವತಿ ಆಸ್ಪತ್ರೆಯಲ್ಲಿ 7 ವೆಂಟಿಲೇಟರ್ ಮಾತ್ರ ಲಭ್ಯವಿವೆ. ಉಳಿದ ವೆಂಟಿಲೇಟರ್ಗಳನ್ನು ಬಳಕೆಗೆ ಲಭ್ಯವಾಗಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂಬುದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರ ಮಾತು.
ಮೂರ್ನಾಲ್ಕು ಇಲಾಖೆ ಸೇರಿಕೊಂಡು ಕೆಲಸ ಮಾಡಬೇಕಾಗಿದೆ. ಹೀಗಾಗಿ ಅಧಿಕಾರಿಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸ ಕಂಡು ಬರುವುದು ಸಹಜ. ಆದರೆ ಇದು ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಮುಖ್ಯ ಕಾರಣವಲ್ಲ. ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯನ್ನು ಸರಿಪಡಿಸಲಾಗುತ್ತದೆ. ಜಿಲ್ಲೆಯಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಮುಖ್ಯ ಕಾರಣ ಸೋಂಕಿತರು ಸೋಂಕಿನ ಲಕ್ಷಣ ಕಾಣಿಸಿಕೊಂಡ ಆರಂಭಿಕವಾಗಿ ಆಸ್ಪತ್ರೆಗೆ ಬರುತ್ತಿಲ್ಲ. ಕೊನೆ ಕ್ಷಣದಲ್ಲಿ ಬರುತ್ತಿದ್ದಾರೆ ಇದು ಮುಖ್ಯ ಕಾರಣ ಎನ್ನುತ್ತಾರೆ ಡಿಸಿ ವಿಕಾಸ್ ಕಿಶೋರ್ ಸುರಳ್ಕರ್ ಅವರು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಈಗ ಕೊರೊನಾ ಸೋಂಕು ಜನರಲ್ಲಿ ಮತ್ತಷ್ಟು ಭೀತಿ ಹೆಚ್ಚಿಸಿದೆ.