ಕುಷ್ಟಗಿ(ಕೊಪ್ಪಳ): ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಅನಿರ್ಬಂಧಿತ ಅನುದಾನ ಬಳಸುವಂತಿಲ್ಲ ಎಂದು ತಾ.ಪಂ. ಇಓ ಕೆ. ತಿಮ್ಮಪ್ಪ ಹೇಳಿದರು.
ತಾಲೂಕಾ ಪಂಚಾಯತಿ ಸಭಾಂಗಣದಲ್ಲಿ ನಡೆದ 2010-21ನೇ ಸಾಲಿನ ಅನಿರ್ಬಂಧಿತ ಅನುದಾನದ ಕ್ರಿಯಾಯೋಜನೆ ಕುರಿತ ಸಭೆಯಲ್ಲಿ ಕ್ರಿಯಾ ಯೋಜನೆಯಲ್ಲಿ ಕೈಗೊಳ್ಳುವ ಕಾಮಗಾರಿಗಳ ಮಾಹಿತಿ ನೀಡಿದ ಅವರು, ಈ ಅನುದಾನವನ್ನು ದೇವಸ್ಥಾನಕ್ಕೆ ದೇಣಿಗೆ ನೀಡುವಂತಿಲ್ಲ. ವೈಯಕ್ತಿಕ ಫಲಾನುಭವಿಗಳಿಗೆ ಗೌರವ ಧನ ನೀಡುವಹಾಗಿಲ್ಲ ಎಂದರು.
ಹಳೆ ಕಾಮಗಾರಿಗಳಿಗೆ ಈ ಅನುದಾನ ಬಳಸದೇ ಆದಷ್ಟು ಹೊಸ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕು. ತಾಲೂಕಿನಲ್ಲಿ 699 ಕೋಟಿ ರೂ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದ್ದು, ಕೊಳವೆಬಾವಿ ಹಾಕಿಸುವ ಅಗತ್ಯವೇ ಬರದು. ಈ ಅನುದಾನದಲ್ಲಿ ಕೊಳವೆಬಾವಿ ಕೊರೆಸಲು ಅವಕಾಶವಿಲ್ಲ. ಬದಲಿಗೆ ಅರ್ಧಕ್ಕೆ ನಿಂತಿರುವ ಪೈಪಲೈನ್ ಕಾಮಗಾರಿಗೆ ಬಳಸಿಕೊಳ್ಳಲು ಸಾಧ್ಯವಿದೆ. ಶಾಲೆ, ಅಂಗನವಾಡಿ ದುರಸ್ತಿ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದರು.
ಅನಿರ್ಬಂಧಿತ ಅನುದಾನವಾಗಿ ಸರ್ಕಾರದಿಂದ 2 ಕೋಟಿ ರೂ. ಮಂಜೂರಾಗಿದೆ. ಮೊದಲ ಕಂತಾಗಿ 50 ಲಕ್ಷ ರೂ. ಬಿಡುಗಡೆಯಾಗಿದೆ. ಈ ಮೊತ್ತದಲ್ಲಿ ಕುಡಿಯುವ ನೀರು, ಕೊರೊನಾ ಪರಿಸ್ಥಿತಿಯಲ್ಲಿ ನೈರ್ಮಲ್ಯಕ್ಕೆ ಆದ್ಯತೆ ಪ್ರಸ್ತಾಪಿಸಿ 50 ಲಕ್ಷ ರೂ.ಗಳ ಕ್ರಿಯಾಯೋಜನೆಗೆ ಸಭೆ ಸಮ್ಮತಿ ಸೂಚಿಸಿ ನಿರ್ಣಯ ಅಂಗೀಕರಿಸಿತು.
ತಾ.ಪಂ. ಅಧ್ಯಕ್ಷೆ ಮಹಾಂತಮ್ಮ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಬದಾಮಿ ಸೇರಿದಂತೆ ಮತ್ತಿತರರಿದ್ದರು.