ಕೊಪ್ಪಳ: ರಫ್ತು ಮಾಡುವ ಮಾಹಿತಿ ಕೊರತೆ, ಸರ್ಕಾರದ ಅಸಡ್ಡೆತನ ಹಾಗೂ ದುಂಡಾಣು ಅಂಗಮಾರಿ ರೋಗದ ಪರಿಣಾಮ ಕುಷ್ಟಗಿ ಪಟ್ಟಣದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಲಾಗಿರುವ ದಾಳಿಂಬೆಯ ಸುಸಜ್ಜಿತ ಪ್ಯಾಕೇಜಿಂಗ್ ಯುನಿಟ್ ಕೆಲಸಕ್ಕೆ ಬಾರದೆ ನಿರುಪಯುಕ್ತವಾಗಿದೆ. ದಾಳಿಂಬೆ ಬೆಳೆಗಾರರ ಹಿತದೃಷ್ಟಿಯಿಂದ ಲಕ್ಷಾಂತರ ರೂ. ಖರ್ಚು ಮಾಡಿ ಅಳವಡಿಸಲಾದ ಪ್ಯಾಕೇಜಿಂಗ್ ಯೂನಿಟ್ ಈಗ ಧೂಳು ಹಿಡಿದಿದ್ದು ಬೇಸರದ ಸಂಗತಿ.
ಹೌದು, ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಲಾಗಿರುವ ದಾಳಿಂಬೆ ಪ್ಯಾಕೇಜಿಂಗ್ ಯೂನಿಟ್ ಕಳೆದ 10 ವರ್ಷದಿಂದ ನಿರುಪಯುಕ್ತವಾಗಿ ಬಿದ್ದಿದೆ. ಕುಷ್ಟಗಿ ತಾಲೂಕಿನಲ್ಲಿ ಈ ಹಿಂದೆ ಉತ್ಕೃಷ್ಟ ಗುಣಮಟ್ಟದ ದಾಳಿಂಬೆ ಬೆಳೆಯಲಾಗುತ್ತಿತ್ತು. ರಫ್ತು ಗುಣಮಟ್ಟದ ದಾಳಿಂಬೆ ಸಂಗ್ರಹಿಸಲು 2009ರಲ್ಲಿ ಸರ್ಕಾರ ಕುಷ್ಟಗಿ ಪಟ್ಟಣದಲ್ಲಿ ಕೊಟ್ಯಂತರ ರೂ. ಖರ್ಚು ಮಾಡಿ ಶೀತಲ ಸಂಗ್ರಹಣಾ ಘಟಕ ಸ್ಥಾಪಿಸಿದ್ದು ಈ ಘಟಕದಲ್ಲಿಯೇ ದಾಳಿಂಬೆ ಪ್ಯಾಕೇಜಿಂಗ್ ಯೂನಿಟ್ ತೆರೆಯಲಾಗಿತ್ತು. ಆದರೆ, 2009ರ ನಂತರ ತಾಲೂಕಿನಲ್ಲಿ ದುಂಡಾಣು ಅಂಗಮಾರಿ ರೋಗ ಬಂದಿದ್ದರಿಂದ ದಾಳಿಂಬೆ ಬೆಳೆ ನೆಲ ಕಚ್ಚಿತು. ಸಾಲದೆಂಬಂತೆ ಸರ್ಕಾರದ ಅಸಡ್ಡೆತನ ಹಾಗೂ ರಫ್ತು ಮಾಡುವ ಮಾಹಿತಿ ಕೊರತೆಯಿಂದ ಈ ದಾಳಿಂಬೆ ಪ್ಯಾಕೇಜಿಂಗ್ ಯೂನಿಟ್ ಧೂಳು ಹಿಡಿಯಲು ಪ್ರಾರಂಭಿಸಿತು. ಇದೀಗ ಕೆಲಸವಿಲ್ಲದೆ ಕಳೆದ 10 ವರ್ಷದಿಂದ ನಿಂತಲ್ಲೇ ನಿಂತಿದ್ದು ದಾಳಿಂಬೆ ಬೆಳೆಗಾರರಲ್ಲಿ ಬೇಸರ ತಂದಿದೆ.
ಅಲ್ಲೊಬ್ಬರು, ಇಲ್ಲೊಬ್ಬರು ಎಂಬಂತೆ ದಾಳಿಂಬೆ ಬೆಳೆಯುತ್ತಿದ್ದು ಪ್ಯಾಕೇಜಿಂಗ್ ಯೂನಿಟ್ ನಿರುಪಯುಕ್ತವಾಗಲು ಇದೂ ಒಂದು ಕಾರಣ ಇರಬಹಹುದು. ದಾಳಿಂಬೆ ಪ್ಯಾಕೇಜಿಂಗ್ ಯೂನಿಟ್ ಅನ್ನೋದು ಒಂದು ಸುಸಜ್ಜಿತ ಯಂತ್ರ. ಕಟಾವು ಮಾಡಿದ ದಾಳಿಂಬೆಯನ್ನು ತಂದು ಯೂನಿಟ್ಗೆ ಹಾಕಲಾಗುತ್ತದೆ. ವಾಶಿಂಗ್, ಡ್ರೈಯರ್, ತೂಕ ಹಾಗೂ ಗಾತ್ರದ ಆಧಾರ ಮೇಲೆ ಅವುಗಳನ್ನು ಬೇರ್ಪಡಿಸಿ ಪ್ಯಾಕಿಂಗ್ ಮಾಡುವ ಒಂದು ವಿಧಾನ. ಆಳು-ಕಾಳುಗಳಿಗೆ ಹೋಲಿಸಿದರೆ ಇದರಿಂದ ಉಳಿತಾಯ ಹೆಚ್ಚು. ಆದರೆ, ದಾಳಿಂಬೆ ಬೆಳೆಯುವ ಪ್ರಮಾಣ ಕಡಿಮೆಯಾಗಿದ್ದರಿಂದ ಪ್ಯಾಕೇಜಿಂಗ್ ಯೂನಿಟ್ಗೆ ಕೆಲಸವಿಲ್ಲದಂತಾಗಿದೆ. ರಫ್ತು ಮಾಹಿತಿ ಕೊರತೆ, ಸರ್ಕಾರದ ಅಸಡ್ಡೆತನ, ಬೆಳೆಗಾರರ ಸಂಖ್ಯೆಯಲ್ಲಿ ಗಣನೀಯ ಇಳಿಕೆ, ಅಳಿದುಳಿದ ಬೆಳೆಗಾರರ ದಾಳಿಂಬೆಯನ್ನು ಮಧ್ಯವರ್ತಿಗಳು ಖರೀದಿ ಮಾಡುತ್ತಿರುವುದರಿಂದ ಪ್ಯಾಕೇಜಿಂಗ್ ಯೂನಿಟ್ ಬಳಕೆಯಾಗುತ್ತಿಲ್ಲ ಎನ್ನುತ್ತಾರೆ ಕುಷ್ಟಗಿಯ ಪ್ರಗತಿಪರ ರೈತ ವೀರೇಶ ತುರಕಾಣಿ.
ದಾಳಿಂಬೆ ಪ್ಯಾಕೇಜಿಂಗ್ ಯುನಿಟ್ ಈಗಲೂ ಸುಸಜ್ಜಿತವಾಗಿದೆ. ಈ ಭಾಗದಲ್ಲಿ ದಾಳಿಂಬೆ ಬೆಳೆ ಪ್ರಮಾಣ ಹೆಚ್ಚಾದರೆ ಅಥವಾ ರಫ್ತುದಾರರು ಇಲ್ಲಿಗೆ ಬಂದರೆ ಈ ಯೂನಿಟ್ ಅಂದುಕೊಂಡಂತೆ ಬಳಕೆಯಾಗಲಿದೆ ಎನ್ನುತ್ತಾರೆ ಶೀತಲ ಸಂಗ್ರಹಣಾ ಘಟಕದ ಉಸ್ತುವಾರಿ ಅಧಿಕಾರಿ ಭೀಮನಗೌಡ ಬಿರಾದಾರ್.
ಒಟ್ಟಿನಲ್ಲಿ ದಾಳಿಂಬೆ ಬೆಳೆಗೆ ಬಂದ ದುಂಡಾಣು ಅಂಗಮಾರಿ ರೋಗ ಹಾಗೂ ರಫ್ತು ಮಾಡುವ ಕುರಿತು ಸರ್ಕಾರ ರೈತರಿಗೆ ಸರಿಯಾದ ಮಾಹಿತಿ ನೀಡದೇ ಇರುವ ಈ ಕಾರಣದಿಂದಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಸ್ಥಾಪಿಸಿರುವ ದಾಳಿಂಬೆ ಪ್ಯಾಕೇಜಿಂಗ್ ಯೂನಿಟ್ ನಿಂತಿರುವುದು ವಿಪರ್ಯಾಸವೇ ಸರಿ.