ಕೊಪ್ಪಳ: ಕಳೆದ ವಿಧಾಸಭಾ ಚುನಾವಣೆ ಒಂದು ಕೆಟ್ಟ ಕನಸು ಎಂದು ಭಾವಿಸಿ ಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಜನರು ಬಯಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಕೊಪ್ಪಳದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕರುಗಳಾದ ಬಿ.ಎಸ್. ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ, ಆರ್. ಅಶೋಕ್ ಸೇರಿ ಏಳು ತಂಡಗಳಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ, ಕೇಂದ್ರ ಸರ್ಕಾರದ ಸಾಧನೆಯನ್ನು ಜನರ ಮುಂದಿಡಲಿದ್ದೇವೆ. ಸಂಘಟನೆ, ಸಾಧನೆ ಮತ್ತು ನಾಯಕತ್ವ ಈ ಮೂರು ಅಂಶವನ್ನಿಟ್ಟುಕೊಂಡು ಲೋಕಸಭೆ ಚುನಾವಣೆಗೆ ಹೋಗುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಖಂಡಿತ ಗೆಲುವು ನಮ್ಮದೇ. ಮತ್ತೆ ನರೇಂದ್ರ ಮೋದಿ ಅವರೇ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನರೇಂದ್ರ ಮೋದಿಯವರನ್ನು ಸೋಲಿಸಲು ಪ್ರತಿಪಕ್ಷಗಳು ಒಂದಾಗುತ್ತಿವೆಯಲ್ಲ ಎಂಬ ಮಾಧ್ಯಮದವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಾಂಡವರು ಇದ್ದಿದ್ದು ಐದೇ ಜನ, ಕೌರವರು ಇದ್ದಿದ್ದು 100 ಜನ ಶ್ರೀ ಕೃಷ್ಣಪರಮಾತ್ಮ ಧರ್ಮದ ಪರ ಇದ್ದರಿಂದ ಧರ್ಮ ಉಳಿಯಿತು. ಹಾಗೆಯೇ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳೆಲ್ಲ ಒಂದಾಗಬೇಕು ಎಂದು ಹೇಳುತ್ತಿವೆ. ಇವತ್ತು ಒಂದು ಮೀಟಿಂಗ್ಗೆ ಹೋಗುವವರು ನಾಳೆ ಮತ್ತೊಂದು ಮೀಟಿಂಗ್ಗೆ ಹೋಗಲ್ಲ. ಇದು ದೇಶದಲ್ಲಿರುವಂತಹ ವಿರೋಧ ಪಕ್ಷಗಳ ಪರಿಸ್ಥಿತಿ. ಈ ಪ್ರಯತ್ನ ಇದೇ ಮೊದಲಲ್ಲ. ಹಲವು ಬಾರಿ ಮಾಡಿದ್ದಾರೆ ಹಾಗೇ ವಿಫಲರಾಗಿದ್ದಾರೆ. ಈ ಬಾರಿಯೂ ಅವರು ವಿಫಲರಾಗುತ್ತಾರೆ ಎಂದರು.
ದೇಶ ಉಳಿಸಬೇಕು, ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಗುರಿಯನ್ನಿಟ್ಟುಕೊಂಡು ಮುನ್ನಡೆಯುತ್ತೇವೆ. ನಮ್ಮಲ್ಲಿ ಆಗಿರುವ ಕುಂದುಕೊರತೆಯನ್ನು ಸರಿಪಡಿಸಿಕೊಂಡು ಹೋಗುತ್ತೇವೆ ಎಂದರು. ಹಾಲಿ ಸದಸ್ಯರಿಗೆ ಟಿಕೆಟ್ ಇಲ್ಲ ಎಂಬ ಮಾತಿಗೆ ಪ್ರತ್ರಿಕ್ರಿಯಿಸಿ, ಈ ಕುರಿತು ಪಕ್ಷದಲ್ಲಿ ಯಾವುದೇ ತೀರ್ಮಾನವಾಗಿಲ್ಲ. ಟಿಕೆಟ್ ಯಾರಿಗೆ ಕೊಡಬೇಕು, ಯಾರಿಗೆ ಕೊಡಬಾರದು ಎಂಬುದನ್ನು ಪಕ್ಷದ ಹಿರಿಯ ನಾಯಕರು ಚರ್ಚಿಸಿ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ರಾಜ್ಯದಲ್ಲಿ ಸುಳ್ಳು ಗ್ಯಾರಂಟಿ ಕಾರ್ಡ್ ಹಂಚಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಹನಿಮೂನ್ ಪಿರಿಯಡ್ ಮುಗಿಯಿತು. ಸದ್ಯ ರಾಜ್ಯದಲ್ಲಿ ರೈತರ ಬೆಳೆಗೆ ನೀರಿಲ್ಲ. ಎಲ್ಲ ಜಲಾಶಯಗಳು ಬರಿದಾಗುತ್ತಿವೆ. ರಾಜ್ಯ ಸರ್ಕಾರವನ್ನು ಎಚ್ಚರಗೊಳಿಸಲು, ವಿಧಾನಸಭೆ, ವಿಧಾನ ಪರಿಷತ್ನಲ್ಲಿ ನಮ್ಮ ಶಾಸಕರು ನೀತಿಗೆಟ್ಟ ರಾಜಕಾರಣದ ವಿರುದ್ಧ ಹೋರಾಟ ಮಾಡಲಿದ್ದಾರೆ. ಕಾಂಗ್ರೆಸ್ಗೆ ಚುನಾವಣೆ ಭರವಸೆ ನೀಡುವಾಗ ಮೈಮೇಲೆ ಜ್ಞಾನ ಇರಬೇಕಿತ್ತು ಎಂದರು.
10 ಕೆಜಿ ಅಕ್ಕಿ ಕೊಡುತ್ತೇವೆ ಎನ್ನುವ ಮೊದಲು ಒಬ್ಬರಾದರೂ ಮೋದಿ ಅವರ ಜೊತೆ ಮಾತನಾಡಿದ್ದಾರಾ?. ಈ ಮುಂಚೆ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ನೀಡುತ್ತಿತ್ತು, ಅದನ್ನಾದರೂ ಇವರು ಜನರಿಗೆ ಹೇಳಿದ್ದಾರಾ?. ನಿರುದ್ಯೋಗಿ ಪದವೀಧರರಿಗೆ ಭತ್ಯೆ, ವಿದ್ಯುತ್ ಕೊಡೋಕೆ ಆಗ್ತಿಲ್ಲ ಎಂದು ತಮ್ಮ ತಪ್ಪನ್ನು ಈಗಲಾದರೂ ಒಪ್ಪಿಕೊಳ್ಳಲಿ. ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದಿದ್ದು ತಾತ್ಕಾಲಿಕ ಜಯವಿದು, ಜನರಿಗೆ ಆಗಿರುವ ತೊಂದರೆಯನ್ನು ನಿವಾರಿಸೋದು ಚುನಾಯಿತ ಸರ್ಕಾರದ ಜವಾಬ್ದಾರಿ. ಅದನ್ನು ಬಿಟ್ಟು ರಾಜ್ಯದಲ್ಲಿ, ದೇಶದಲ್ಲಿ ಏನೇ ನಡೆದರೂ ಬಿಜೆಪಿಯರೇ ಕಾರಣ ಎಂದು ಹೇಳಿ ಹೇಳಿ ಕಾಂಗ್ರೆಸ್ಗೆ ರೂಢಿಯಾಗಿದೆ. ತಾವು ಅಧಿಕಾರದಲ್ಲಿದ್ದೇವೆ ಎಂಬುದನ್ನೆ ಮರೆತು ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ಗುತ್ತಿಗೆದಾರರ ನಿಯೋಗದಿಂದ ಸಿಎಂ ಭೇಟಿ.. ಈಗಿನ ಸಚಿವ, ಶಾಸಕರು ಕಮಿಷನ್ ಕೇಳಿದರೆ ಅದನ್ನೂ ಬಹಿರಂಗ ಪಡಿಸುತ್ತೇವೆ: ಕೆಂಪಣ್ಣ