ಗಂಗಾವತಿ: ವೃತ್ತಿಯಲ್ಲಿ ಕೆಪಿಟಿಸಿಎಲ್ ನೌಕರ. ಆದರೆ, ಪ್ರವೃತ್ತಿಯಲ್ಲಿ ಹವ್ಯಾಸಿ ಛಾಯಾಗ್ರಾಹಕ. ಕಳೆದ ಆರೇಳು ವರ್ಷದಿಂದ ಮೈಗೂಡಿಸಿಕೊಂಡ ಆಸಕ್ತಿ ಇದೀಗ ವ್ಯಕ್ತಿಯೊಬ್ಬರಿಗೆ ಚಿನ್ನದ ಫಲ ನೀಡಿದೆ.
ನಗರದ ಕೆಪಿಟಿಸಿಎಲ್ ನೌಕರ ಶ್ರೀನಿವಾಸ್ ಎನ್ನುವವರಿಗೆ ದೂರದ ಗಲ್ಫ್ ದೇಶದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಛಾಯಾಚಿತ್ರಗಳ ಸ್ಪರ್ಧೆಯ ವಾರಿಯರ್ ಫೆಸ್ಟಿವಲ್ ವಿಭಾಗದಲ್ಲಿ ಚಿನ್ನದ ಪದಕ ತಂದು ಕೊಟ್ಟಿದೆ.
ಗಲ್ಫ್ ಸಮೂಹದ ದೇಶಗಳಾದ ಬಹೆರಾನ್ ಯುಎಇ, ಸೌದಿ ಅರೇಬಿಯಾ ಹಾಗೂ ಕುವೈತ್ ದೇಶಗಳ ಫೋಟೋಗ್ರಾಫಿಕ್ ಸೊಸೈಟಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಶ್ರೀನಿವಾಸ್ ಅವರಿಗೆ ಗೋಲ್ಡ್ ಮೆಡಲ್ ಸಿಕ್ಕಿದೆ.
ಸ್ಪರ್ಧೆಯಲ್ಲಿ ತೀರ್ಪುಗಾರರಾಗಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಗಾರರಾದ ಅಮರ್ ಅಲಾಮಿನ್, ಓಲಾ ಅಲ್ಹೌಜ್, ನೌಜಾದ್ ಆಲ್, ಶಫೀಕ್ ಅಲ್ ಶಕೀರ್, ಫರ್ಸಾನಲಿ ಭಾಗವಹಿಸಿದ್ದರು.
"ಒಟ್ಟು 48 ದೇಶಗಳ 350ಕ್ಕೂ ಹೆಚ್ಚು ಸ್ಪರ್ಧಿಗಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. ಆನ್ಲೈನ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಜೂ.22ಕ್ಕೆ ಫಲಿತಾಂಶ ಘೋಷಣೆಯಾಗಿದ್ದು, ಗಲ್ಫ್ ಸಮೂಹದ ನಾಲ್ಕೂ ದೇಶದಲ್ಲೂ ಛಾಯಾಚಿತ್ರಗಳು ಪ್ರದರ್ಶನವಾಗುತ್ತವೆ" ಎಂದು ಶ್ರೀನಿವಾಸ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.