ಕೊಪ್ಪಳ: ಬಿಟ್ ಕಾಯಿನ್ ಹಗರಣದ ಅಂತ್ಯಕ್ಕೆ ತನಿಖೆಯೊಂದೇ ಪರಿಹಾರ. ಈವರೆಗೆ ಪ್ರಕರಣದ ಬಗ್ಗೆ ಯಾಕೆ ತನಿಖೆಯಾಗುತ್ತಿಲ್ಲ? ಎಂದು ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣದ ತನಿಖೆ ಆಗುವವರೆಗೂ ಆರೋಪಗಳು ಸಹಜ ಎಂದರು.
ರಾಜ್ಯದಲ್ಲಿ ಮುಂದೆ ನಮ್ಮ ಸರ್ಕಾರ ಬಂದರೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರಿಬ್ಬರೇ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಗಳಲ್ಲ. ಪಕ್ಷದಲ್ಲಿ ಇನ್ನೂ ಅನೇಕ ಜನ ಸಿಎಂ ಸ್ಥಾನದ ಆಕಾಂಕ್ಷಿಗಳಿದ್ದಾರೆ. ನಮ್ಮೆಲ್ಲ ಶಾಸಕರು ಸೇರಿ ಸಿಎಂ ಆಯ್ಕೆ ಮಾಡುತ್ತಾರೆ ಎಂದು ಜಾರಕಿಹೊಳಿ ತಿಳಿಸಿದರು.
ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಬದಲಾವಣೆ ಕುರಿತು ನಾನು ಮಾತನಾಡುವುದಿಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ನಾವು ಕೆಲಸ ಮಾಡುವವರು. ಪ್ರತಾಪ್ ಸಿಂಹ ಅವರ ರೀತಿ ಕೇವಲ ಫೇಸ್ಬುಕ್, ವಾಟ್ಸ್ ಆ್ಯಪ್ ಮುಂದೆ ಕೂರಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ: ಶ್ರೀಕಿ ನಾಪತ್ತೆ ಕುರಿತ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸಿಎಂ ಸಿಡಿಮಿಡಿ