ಕೊಪ್ಪಳ: ದಸರಾ ಹಬ್ಬವನ್ನು ನಾಡಿನಾದ್ಯಂತ ಸರಳವಾಗಿ ಆಚರಣೆ ಮಾಡಲಾಗುತ್ತಿದ್ದು, ನಾಳೆ ನಡೆಯಲಿರುವ ಆಯುಧ ಪೂಜೆಗೆ ಕೊಪ್ಪಳದಲ್ಲಿ ಜನರು ಇಂದಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕೋವಿಡ್ ಭೀತಿ ಹಿನ್ನೆಲೆಯಲ್ಲಿ ದಸರಾ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆಯಾದರೂ ವಸ್ತುಗಳ ಬೆಲೆ ಮಾತ್ರ ಗಗನಕ್ಕೇರಿದೆ. ಹೂ-ಹಣ್ಣುಗಳ ಬೆಲೆ ದುಬಾರಿಯಾಗಿವೆ. ಒಂದು ಡಝನ್ ಬಾಳೆ ಹಣ್ಣು 50 ರೂಪಾಯಿ, ಒಂದು ಕೆಜಿ ಸೇಬು ಹಣ್ಣಿಗೆ 100 ರಿಂದ 120 ರೂಪಾಯಿ, ಎರಡು ಬಾಳೆಕಂದಿಗೆ 30 ರೂಪಾಯಿ ದರವಿದೆ. ಮಳೆಯಿಂದಾಗಿ ಹೂವಿನ ದರ ತುಸು ಹೆಚ್ಚಾಗಿದ್ದು, ಗ್ರಾಹಕರು ಸಹ ಚೌಕಾಸಿ ನಡೆಸುತ್ತಿದ್ದಾರೆ.
ಇನ್ನೂ ಕೋವಿಡ್ ಹಿನ್ನೆಲೆ ಕಳೆದ ವರ್ಷದಂತೆ ಈ ಬಾರಿ ಉತ್ತಮ ವ್ಯಾಪಾರ ಇಲ್ಲ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು. ಬೆಲೆಗಳು ಏರಿಕೆಯಾಗಿರುವುದರಿಂದ ಗ್ರಾಹಕರ ಜೇಬಿಗೂ ಕತ್ತರಿ ಬೀಳುತ್ತಿದೆ. ಹೂ-ಹಣ್ಣು ಹಾಗೂ ಪೂಜಾ ಸಾಮಾಗ್ರಿ ದರ ಹೆಚ್ಚಾದರೂ ಸಾಂಪ್ರದಾಯದ ದೃಷ್ಟಿಯಿಂದ ಖರೀದಿ ಅನಿವಾರ್ಯ ಎನ್ನುತ್ತಾರೆ ಇಲ್ಲಿನ ಗ್ರಾಹಕರು.