ಕೊಪ್ಪಳ: ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಮತ್ತು ಜನರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದ ಜಿಲ್ಲಾಡಳಿತ ಮನ್ವಂತರ ಕಾರ್ಯಕ್ರಮ ಏರ್ಪಡಿಸಿತ್ತು.
ಈ ಕಾರ್ಯಕ್ರಮಕ್ಕೆ ನಿರೀಕ್ಷೆಗಿಂತ ಹೆಚ್ಚಿನ ರೀತಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು. ವಿದ್ಯಾರ್ಥಿ ಮತ್ತು ವಯಸ್ಕರ ವಿಭಾಗದಲ್ಲಿ ಬಂದಿರುವ ಪುಸ್ತಕಗಳ ವಿಮರ್ಶೆಯ ಶಾರ್ಟ್ ಲಿಸ್ಟ್ ಮಾಡಲಾಗಿದೆ. ಈ ಪೈಕಿ ಜಿಲ್ಲಾಮಟ್ಟದ ಸಂದರ್ಶನಕ್ಕೆ 20 ಜನರ ವಿಮರ್ಶೆಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾಗಿರುವ 20 ವಿಮರ್ಶೆಗಳನ್ನು ಅವರು ನಿಜವಾಗಿ ಪುಸ್ತಕ ಓದಿ ಬರೆದಿದ್ದಾರಾ ಅಥವಾ ಬೇರೆ ಯಾವುದೇ ಮೂಲದಿಂದ ವಿಮರ್ಶೆ ಬರೆದಿದ್ದಾರಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ನಾಳೆ ಮಧ್ಯಾಹ್ನ 3 ಗಂಟೆಗೆ ಈ 20 ಜನರ ಸಂದರ್ಶನ ನಡೆಸಲಾಗುತ್ತದೆ. ಇದರಲ್ಲಿ ವಿದ್ಯಾರ್ಥಿ ವಿಭಾಗದಲ್ಲಿ ಮೂವರನ್ನು ಹಾಗೂ ವಯಸ್ಕರ ವಿಭಾಗದಲ್ಲಿ ಮೂರು ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದೆ:
ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಏರುತ್ತಿದ್ದು, ಕೋವಿಡ್ ಪರೀಕ್ಷೆಯನ್ನು ಸಹ ನಾವು ಹೆಚ್ಚಿಸಿದ್ದೇವೆ. ಜಿಲ್ಲೆಯ ಗಂಗಾವತಿ ಭಾಗದಲ್ಲಿ ಹಾಗೂ ಕೊಪ್ಪಳ ತಾಲೂಕಿನ ಮುನಿರಾಬಾದ್ ಭಾಗದಲ್ಲಿ ಪಾಸಿಟಿವ್ ಪ್ರಮಾಣ ಜಾಸ್ತಿ ಇದೆ. ಕೊರೊನಾದ ಸಣ್ಣ ಲಕ್ಷಣ ಕಂಡು ಬಂದರೂ ಜನರು ತಪಾಸಣೆ ಮಾಡಿಸಿಕೊಂಡು ಸೋಂಕು ಹರಡುವುದನ್ನು ತಡೆಗಟ್ಟಬೇಕು. ದಂಡ ಹಾಕುವುದು, ಕ್ವಾರಂಟೈನ್ ಗೆ ಕಳಿಸುವುದು, ಕೇಸು ದಾಖಲಿಸುವುದು ನಮ್ಮ ಮುಖ್ಯ ಉದ್ದೇಶವಲ್ಲ. ಈ ಮೂಲಕ ಜನರ ವರ್ತನೆಯನ್ನು ಬದಲಾವಣೆ ಮಾಡಬೇಕೆನ್ನುವುದು ನಮ್ಮ ಉದ್ದೇಶ. ಜನರಲ್ಲಿ ಈ ಕುರಿತಂತೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತದೆ. ಆದರೂ ಜನರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ರು.
ಗವಿಮಠದ ಶ್ರೀಗಳೊಂದಿಗೆ ಜಾಗೃತಿ ಅಭಿಯಾನ:
ಕೊರೊನಾ ಸೋಂಕು ಹೆಚ್ಚು ಪತ್ತೆಯಾಗಿರುವ ಪ್ರದೇಶದಲ್ಲಿ ಕೊರೊನಾ ಪರೀಕ್ಷೆ ಹೆಚ್ಚಿಸುವ ನಿಟ್ಟಿನಲ್ಲಿ ಗವಿಮಠದ ಶ್ರೀಗಳೊಂದಿಗೆ ಜಾಗೃತಿ ಅಭಿಯಾನ ಮಾಡಿದ್ದೇವೆ. ಆದರೂ ಜನರು ತಪಾಸಣೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಈಗ ಮಾಡುತ್ತಿರುವ ಟೆಸ್ಟ್ ಗಳಲ್ಲಿ ಪಾಸಿಟಿವ್ ಬಂದ ಶೇಕಡ 80ರಷ್ಟು ಜನರನ್ನು ಹೋಂ ಐಸೋಲೇಷನ್ ಮಾಡಲಾಗುತ್ತಿದೆ. ನಮ್ಮಲ್ಲಿ ಬೆಡ್ಗಳ ಕೊರತೆ ಇಲ್ಲ. ಆದರೆ ವೈದ್ಯರ ಕೊರತೆಯ ಸಮಸ್ಯೆ ಇರುವುದು ನಿಜ. ಆಕ್ಸಿಜನ್ ಸಮರ್ಥ ಪೂರೈಕೆ ಸಮಸ್ಯೆಯೂ ಇಲ್ಲ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ವಿಕಾಸ್ ಸುರಳ್ಕರ್ ಹೇಳಿದರು.