ಕುಷ್ಟಗಿ (ಕೊಪ್ಪಳ): ಹುಲಿಯಾಪುರ ಹಾಗೂ ನೀರಲೂಟಿ ಗ್ರಾಮಕ್ಕೆ ಸಕಾಲಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಕುಷ್ಟಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಂದೆ ವಿದ್ಯಾರ್ಥಿಗಳು (ಎಸ್ಎಫ್ಐ) ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಫೆ. 12 ರಂದು ಶಾಸಕರ ಕಛೇರಿ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ್ದು ಬಿಟ್ಟರೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕೊರೊನಾ ಕಾರಣ ಶಾಲಾ-ಕಾಲೇಜುಗಳು ಇತ್ತೀಚೆಗೆ ಪುನಾರಂಭಗೊಂಡಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷ ಇನ್ನೆರಡು ತಿಂಗಳಿನಲ್ಲಿ ಮುಕ್ತಾಯಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಬಸ್ ಸಮಸ್ಯೆಯಾದರೆ ಶೈಕ್ಷಣಿಕ ಭವಿಷ್ಯಕ್ಕೆ ಹಿನ್ನಡೆಯಾಗುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಕೂಡಲೇ ಕುಷ್ಟಗಿ- ತಾವರಗೇರಾ ಮಾರ್ಗದ ಬಸ್ಗಳನ್ನು ಬೆಳಗ್ಗೆ 8.30 ಹಾಗೂ ಸಂಜೆ 4.30ರ ವೇಳೆಯಲ್ಲಿ ಹುಲಿಯಾಪುರ, ನೀರಲೂಟಿ ಮೂಲಕ ಸಂಚರಿಸುವಂತೆ ವ್ಯವಸ್ಥೆ ಮಾಡಬೇಕು. ಇಲ್ಲವೇ ಪ್ರತ್ಯೆಕ ಬಸ್ ಓಡಿಸುವಂತೆ ಒತ್ತಾಯಿಸಿದರು.
ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ಡಿಪೋ ಸಿಬ್ಬಂದಿ ಮೂರು ದಿನಗಳ ಕಾಲಾವಕಾಶ ಹಾಗೂ ಹಿಂಬರಹ ನೀಡಿದ್ದರಿಂದ ಪ್ರತಿಭಟನೆ ವಾಪಸ್ ಪಡೆದರು.
ಇದನ್ನೂ ಓದಿ: ದಂತ ವೈದ್ಯನಿಗೆ ಚೂರಿ ಇರಿತ; ಸಾರ್ವಜನಿಕರಿಂದ ದುಷ್ಕರ್ಮಿಗೆ ಥಳಿತ