ಕೊಪ್ಪಳ : ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಾ ರಾ ಚಂದ್ರಬಾಬು ನಾಯ್ಡು ಅವರ ಬಂಧನ ಖಂಡಿಸಿ ಕರ್ನಾಟಕದಲ್ಲೂ ಕೂಡ ಆಕ್ರೋಶ ವ್ಯಕ್ತವಾಗುತ್ತಿದೆ. ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.
ಚಂದ್ರಬಾಬು ನಾಯ್ಡು ದೂರದೃಷ್ಟಿಯುಳ್ಳ ನಾಯಕ. ಅಭಿವೃದ್ಧಿಯ ಸ್ಪಷ್ಟ ಕಲ್ಪನೆ ಹೊಂದಿರುವ ನಾಯ್ಡು ಅವರನ್ನು ಬಂಧಿಸಿರುವುದು ಖಂಡನೀಯ. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇಡಿ, ಸಿಬಿಐ ಮುಂತಾದ ಕೇಸ್ಗಳಿರುವ ಜಗನ್ ಆಂಧ್ರಪ್ರದೇಶದ ಚುನಾವಣೆ ಇರುವ ಹಿನ್ನಲೆಯಲ್ಲಿ ನಾಯ್ಡು ವಿರುದ್ಧ ಕೇಸ್ ದಾಖಲಿಸಿ, ಬಂಧಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.
ಚಂದ್ರಬಾಬು ನಾಯ್ಡು ಅವರ ವಿರುದ್ಧ ಇಲ್ಲಸಲ್ಲದ ಕೇಸ್ಗಳನ್ನು ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ. ಅವರು ಹೈದರಾಬಾದ್ ಅನ್ನು ಐಟಿಬಿಟಿ ಹಬ್ ಆಗಿ ನಿರ್ಮಿಸುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ. ಅನೇಕ ಯುವ ಜನರಿಗೆ ಉದ್ಯೋಗ ಅವಕಾಶ ಒದಗಿಸಿಕೊಟ್ಟಿದ್ದಾರೆ ಎಂದರು.
ಜಾಮೀನಿನ ಮೇಲೆ ಹೊರಗಿರುವ ಮುಖ್ಯಮಂತ್ರಿ ಎಂದು ಟಿಡಿಪಿಯು ಜಗನ್ ಅವರನ್ನು ಜರಿದಿತ್ತು. ಈಗ ಅದಕ್ಕೆ ಪ್ರತೀಕಾರವಾಗಿ ನಾಯ್ಡು ಬಂಧನ ನಡೆದಿದೆಯೇ ಅನ್ನೋದು ಪ್ರತಿಭಟನಾಕಾರರ ಪ್ರಶ್ನೆಯಾಗಿದೆ. ರ‍್ಯಾಲಿಯಲ್ಲಿ ಸಿಬಿಎನ್ ಅಭಿಮಾನಿಗಳ ಸಂಘ, ತೆಲುಗು ಸಂಘ, ಎನ್ಟಿಆರ್ ಅಭಿಮಾನಿಗಳ ಸಂಘ, ನಂದಮೂರಿ ಅಭಿಮಾನಿಗಳ ಸಂಘ, ಪವನ್ ಕಲ್ಯಾಣ್ ಅಭಿಮಾನಿಗಳ ಸಂಘದ ಕಾರ್ಯಕರ್ತರು ಸೇರಿದಂತೆ 5 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ದರು.
ಇದನ್ನೂ ಓದಿ : ವಿಜಯನಗರ: ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಪ್ರತಿಭಟನೆ