ಗಂಗಾವತಿ : ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಮುಂಬರುವ ವಿಪತ್ತು ನಿಭಾಯಿಸಬೇಕಿರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿನ ಶೇ 50ರಷ್ಟು ಬೆಡ್ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಕಟ್ಟುನಿಟ್ಟಿನ ಆದೇಶ ಜಾರಿ ಮಾಡಿದ್ದಾರೆ.
ಕರ್ನಾಟಕ ಮೆಡಿಕಲ್ ಪ್ರೈವೇಟ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ (ಕೆಎಂಪಿಎಲ್) 2007ರ ಅಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವ ವೈದ್ಯಕೀಯ ಸಂಸ್ಥೆಗಳು ಕಡ್ಡಾಯವಾಗಿ ಸರ್ಕಾರದ ಆದೇಶ ಪಾಲನೆ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ನಗರದ ಪ್ರಮುಖ 22 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿರುವ ಜಿಲ್ಲಾಧಿಕಾರಿ, ಕಡ್ಡಾಯವಾಗಿ ಶೇ 50ರಷ್ಟು ಹಾಸಿಗೆ ಒದಗಿಸಿಕೊಡಬೇಕು ಅಥವಾ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ಸೇರಿ ಅಷ್ಟೇ ಪ್ರಮಾಣದ ಹಾಸಿಗೆಗಳನ್ನು ಬೇರೆ ಎಲ್ಲಾದರೂ ಮೀಸಲು ಮಾಡುವ ವ್ಯವಸ್ಥೆ ಮಾಡಬೇಕು ಎಂದು ಆದೇಶಿಸಿದ್ದಾರೆ.
ನಗರದಲ್ಲಿ ಪ್ರಮುಖ 22 ಖಾಸಗಿ ನರ್ಸಿಂಗ್ ಹೋಂಗಳನ್ನು ಒಟ್ಟುಗೂಡಿಸಿದರೆ ಒಟ್ಟು 300 ಬೆಡ್ಗಳಿದ್ದು, ಈ ಪೈಕಿ 150 ಬೆಡ್ಗಳನ್ನು ಮೀಸಲಿಡುವಂತೆ ಈಗಾಗಲೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗಳ ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದಾರೆ.