ಕೊಪ್ಪಳ : ಕೊರೊನಾ ಕುರಿತು ಆತಂಕಕಾರಿಯಾಗಿ ಗಂಗಾವತಿ ಉಪವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಈಶ್ವರ ಅವರು ಹೇಳಬಾರದಿತ್ತು ಎಂದು ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ್ ಹೇಳಿದ್ದಾರೆ.
ಡಾ. ಈಶ್ವರ ಸವಡಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಕೊರೊನಾಗೆ ಸಂಬಂಧಿಸಿದ ಯಾವುದೇ ಅಂಕಿ-ಅಂಶಗಳ ಕುರಿತು ಮಾಹಿತಿ ನೀಡುವುದು ಜಿಲ್ಲಾಧಿಕಾರಿ ಮಾತ್ರ. ಆದರೆ, ಗಂಗಾವತಿ ಉಪವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ ಐಸಿಎಂಆರ್ ವರದಿ ಉಲ್ಲೇಖಿಸಿ ಜಿಲ್ಲೆಯಲ್ಲಿ 397 ಪಾಸಿಟಿವ್ ಕೇಸ್ ಬರುತ್ತವೆ ಹಾಗೂ 19 ಜನರಿಗೆ ಅಪಾಯವಿದೆ ಎಂದು ಮಾತನಾಡಿದ್ದರು.
ಈ ಹೇಳಿಕೆ ಜನರಲ್ಲಿ ಆತಂಕ ಮೂಡಿಸುವಂತಿದೆ. ಅವರು ಆ ರೀತಿ ಹೇಳಬಾರದಿತ್ತು. ಇಷ್ಟು ದಿನ ಜಿಲ್ಲೆಯ ಜನರಲ್ಲಿ ಯಾವುದೇ ಆತಂಕವಿರಲಿಲ್ಲ. ಈ ಹೇಳಿಕೆಯಿಂದ ಆತಂಕ ಸೃಷ್ಟಿಯಾಗಿದೆ. ನಮಗೆ ಬಹಳ ಫೋನ್ ಕಾಲ್ ಬರುತ್ತಿವೆ. ಹೇಳಿಕೆ ನೀಡಿರುವ ವೈದ್ಯರಿಂದ ಮಾಹಿತಿ ಕೇಳಲಾಗಿದೆ ಎಂದರು.
ಕೊರೊನಾ ಕುರಿತು ಅಧಿಕೃತವಾಗಿ ನಾನು ಮಾತ್ರ ಮಾಹಿತಿ ನೀಡುತ್ತೇನೆ. ಡಾ. ಈಶ್ವರ ಸವಡಿ ಸಾಧ್ಯಾಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಅವರಿಗೆ ನಾವು ವಾರ್ನ್ ಮಾಡಿದ್ದೇವೆ. ಯಾರೂ ಕೂಡಾ ಈ ರೀತಿ ಮಾತನಾಡಬಾರದು. ಸದ್ಯ ನಮ್ಮ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಕೇಸ್ ಇಲ್ಲ. ಜಿಲ್ಲೆಯಲ್ಲಿ ಈವರೆಗೆ 831 ಜನರ ವರದಿ ನೆಗೆಟಿವ್ ಬಂದಿದೆ. ಜನರು ಆತಂಕಕ್ಕೆ ಒಳಗಾಗಬಾರದು. ಅಲ್ಲದೆ ಲಾಕ್ಡೌನ್ ನಿಯಮಗಳನ್ನು ಸಡಿಲಿಸಲಾಗಿದೆ ಎಂದು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು ಎಂದು ಸುನೀಲ್‌ಕುಮಾರ್ ಹೇಳಿದರು.