ಕೊಪ್ಪಳ : ಹಿಜಾಬ್ ಸಂಘರ್ಷ ವಿಚಾರ ಈಗ ನ್ಯಾಯಾಲಯದ ಮುಂದೆ ಇದೆ. ಹೀಗಾಗಿ, ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂಬುದು ನನ್ನ ಮನವಿಯಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಕೊಪ್ಪಳದ ಮುನಿರಾಬಾದ್ನಲ್ಲಿ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜೀನಾಮೆ ಕೊಡುವ ತಪ್ಪು ಮಾತನ್ನು ಈಶ್ವರಪ್ಪ ಮಾತನಾಡಿಲ್ಲ. ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದರಿಂದ ಗಿಮಿಕ್ ಮಾಡುತ್ತಿದ್ದಾರೆ ಎಂದರು.
ನವಲಿ ಜಲಾಶಯಕ್ಕೆ ಈ ಬಾರಿಯ ಬಜೆಟ್ನಲ್ಲಿ ಹಣ ಮೀಸಲಿಡುತ್ತೇವೆ. ನವಲಿ ಜಲಾಶಯಕ್ಕೆ ಸಂಬಂಧಿಸಿದಂತೆ ಮೂರು ರಾಜ್ಯದ ಸಮಸ್ಯೆ ಇದೆ. ಈ ಕುರಿತಂತೆ ಎರಡೂ ರಾಜ್ಯದ ಸಿಎಂಗಳ ಜೊತೆ ಚರ್ಚೆ ಮಾಡುತ್ತೇವೆ. ಮೂರು ರಾಜ್ಯದ ಸಿಎಂ ಸೇರಿ ಚರ್ಚೆ ಮಾಡುತ್ತೇವೆ. ಶೀಘ್ರದಲ್ಲೇ ಡಿಪಿಆರ್ ಸರ್ಕಾರದ ಕೈ ಸೇರಲಿದೆ ಎಂದರು.
ತುಂಗಭದ್ರಾ ಕಾಲುವೆ ಹದಗೆಟ್ಟ ಕುರಿತಂತೆ ನಿರ್ವಹಣಾ ವೆಚ್ಚ ತುಂಬಾ ಹಳೇ ದರವಿದೆ. ನಿರ್ವಹಣೆ ವೆಚ್ಚ ಪರಿಷ್ಕಣೆ ಮಾಡುತ್ತೇವೆ. ಟಿಬಿ ಡ್ಯಾಂನಲ್ಲಿ ಇನ್ನೂ 50 ಟಿಎಂಸಿ ನೀರಿದೆ. ಯಾವುದೇ ಸಮಸ್ಯೆ ಇಲ್ಲದಂತೆ ರೈತರಿಗೆ ನೀರು ಕೊಡುತ್ತೇವೆ.
ವಿಜಯನಗರ ಕಾಲುವೆ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ತ್ವರಿತವಾಗಿ ಮುಗಿಸಲು ಸೂಚನೆ ನೀಡಲಾಗಿದೆ. ಕೆಲಸ ಮಾಡಲು ರೈತರ ಸಹಕಾರ ಮುಖ್ಯ. ಕೊನೆ ಭಾಗದ ರೈತರಿಗೆ ನೀರು ಒದಗಿಸಲು ಕೆರೆ ತುಂಬಿಸುವ ಯೋಜನೆ ಕೈಗೆತ್ತಿಕೊಂಡಿದ್ದೇವೆ. 122 ಕೆರೆ ತುಂಬಿಸುವ ಯೋಜನೆ ಕೈಗೆತ್ತಿಕೊಂಡಿದ್ದೇವೆ ಎಂದರು.
ಇದನ್ನೂ ಓದಿ: ಸಮಸ್ಯೆ ಚರ್ಚಿಸಲು ಅಧಿವೇಶನಕ್ಕೆ ಬನ್ನಿ: ಕೈ ಮುಗಿದು ಕೇಳಿಕೊಂಡ ಸಚಿವ ಈಶ್ವರಪ್ಪ