ಕುಷ್ಟಗಿ: ಕೋವಿಡ್ ಮಾರ್ಗಸೂಚಿಯನ್ವಯ ಅಂಗನವಾಡಿ ಕೇಂದ್ರ ಆರಂಭಿಸಿದರೆ ಮಕ್ಕಳನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ನಿಯಮಾವಳಿ ಪ್ರಕಾರ ನಡೆಸುವುದು ಅಸಾಧ್ಯ ಎಂದು ಅಂಗನವಾಡಿ ರಾಜ್ಯ ಉಪಾಧ್ಯಕ್ಷೆ ಕಲಾವತಿ ಮೆಣೆದಾಳ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸರ್ಕಾರದ ಈ ಕ್ರಮದಿಂದ ಅಂಗನವಾಡಿ ಕಾರ್ಯಕರ್ತೆಯರು ಸದ್ಯ ಗೊಂದಲದ ಪರಿಸ್ಥಿತಿ ಎದುರಿಸುವಂತಾಗಿದೆ. ಸರ್ಕಾರದ ಆದೇಶದನ್ವಯ ಅಂಗನವಾಡಿ ಕೇಂದ್ರ ಆರಂಭಿಸಿ ಮಕ್ಕಳಿಗೆ ಸೋಂಕು ವ್ಯಾಪಿಸಿದರೆ ಅಂಗನವಾಡಿ ಕೇಂದ್ರದ ಕಾರ್ಯಕತೆಯರು ಅದರ ಹೊಣೆ ಹೊರಲು ಸಾಧ್ಯವಿಲ್ಲ. ಅದರ ಜವಾಬ್ದಾರಿಯನ್ನು ಅಧಿಕಾರಿಗಳು ವಹಿಸಿಕೊಳ್ಳಬೇಕು. ಹೈಕೋರ್ಟ್ ಅಂಗನವಾಡಿ ಕೇಂದ್ರ ಆರಂಭಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವೆ ಶಶಿಕಲಾ ಜೊಲ್ಲೆ ಸಚಿವ ಸಂಪುಟ ಸಭೆ ಬಳಿಕ ಅಂಗನವಾಡಿ ಮಕ್ಕಳು ಚಿಕ್ಕವರಾಗಿದ್ದು, ಪ್ರಾಥಮಿಕ ಶಾಲೆಗಳು ಆರಂಭಿಸದೇ ಅಂಗನವಾಡಿ ಕೇಂದ್ರ ತೆರೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿ ನಂತರ ನಿಲುವು ಬದಲಿಸಿದ್ದಾರೆಂದು ಕಲಾವತಿ ಮೆಣೆದಾಳ ಆರೋಪಿಸಿದ್ದಾರೆ.