ಕೊಪ್ಪಳ: ಕೊಪ್ಪಳ ಜಿಲ್ಲಾ ಪಂಚಾಯ್ತಿಯ ಉಳಿಕೆ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಕೆ. ರಾಜಶೇಖರ್ ಹಿಟ್ನಾಳ್ ನಿರೀಕ್ಷೆಯಂತೆ ಆಯ್ಕೆಯಾಗಿದ್ದಾರೆ.
ಒಟ್ಟು 29 ಸದಸ್ಯ ಬಲದ ಕೊಪ್ಪಳ ಜಿಲ್ಲಾ ಪಂಚಾಯ್ತಿಯಲ್ಲಿ 17 ಕಾಂಗ್ರೆಸ್, 11 ಬಿಜೆಪಿ ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿಯ 6 ಹಾಗೂ ಓರ್ವ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ನ ಕೆ. ರಾಜಶೇಖರ್ ಹಿಟ್ನಾಳ್ ಅಧ್ಯಕ್ಷರಾಗಿ ಆಯ್ಕೆಯಾದರು.
ರಾಜಶೇಖರ್ ಹಿಟ್ನಾಳ್ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಕುರಿತು ಅಧಿಕೃತವಾಗುತ್ತಿದ್ದಂತೆ ಜಿಲ್ಲಾಡಳಿತ ಭವನದ ಹೊರಗೆ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷ ಕೆ. ರಾಜಶೇಖರ್ ಹಿಟ್ನಾಳ್ ಅವರು, ಎಲ್ಲರ ಸಹಕಾರದಿಂದ ಇಂದು ನಾನು ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಅಭಿವೃದ್ಧಿ ದೃಷ್ಠಿಯಿಂದ ಪಕ್ಷಾತೀತವಾಗಿ ಸದಸ್ಯರು ನನ್ನನ್ನು ಬೆಂಬಲಿಸಿದ್ದಾರೆ. ಯಾವುದೇ ರೀತಿಯ ಕುದುರೆ ವ್ಯಾಪಾರ ನಡೆದಿಲ್ಲ. ಪಕ್ಷದ ಹಿರಿಯರ, ಮುಖಂಡರ, ಸದಸ್ಯರ ನಿರ್ಧಾರದಂತೆ ನಾನು ಅಧ್ಯಕ್ಷನಾಗಿದ್ದೇನೆ. ಜಿಲ್ಲಾ ಪಂಚಾಯ್ತಿಯಿಂದ ಆಗಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಹೇಳಿದರು.